ಬೆಂಗಳೂರು: ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹಾಗೂ ಸಂಕಷ್ಟದಲ್ಲಿರುವ ಪೋಷಕರಿಗೆ ನೆರವಾಗುವುದರಲ್ಲಿ ಸರ್ಕಾರದ ಪಾತ್ರದ ಕುರಿತು ಆಮ್ ಆದ್ಮಿ ಪಾರ್ಟಿಯು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಚಿಂತನ-ಮಂಥನ ಕಾರ್ಯಕ್ರಮವನ್ನು ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರದ ಎಎಪಿ ಉಪಾಧ್ಯಕ್ಷ ಸುರೇಶ್ ರಾಥೋಡ್, ಸೆ. 26ರ ಭಾನುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೆಳಗ್ಗೆ 10:30ರಿಂದ ಮಧ್ಯಾಹ್ನ 2 ಗಂಟೆಯ ತನಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಲಿದ್ದಾರೆ. ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ತತ್ತರಿಸಿರುವ ರಾಜ್ಯದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಸರ್ಕಾರವು ಈ ಬಗ್ಗೆ ಜಾಣಕುರುಡು ಪ್ರದರ್ಶಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಅವೈಜ್ಞಾನಿಕ ನಿರ್ಧಾರಗಳಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಿದೆ. ಅವರು ಎಲ್ಲಾ ಖಾಸಗಿ ಶಾಲೆಗಳಿಗೆ 30% ಶುಲ್ಕ ಇಳಿಸಬೇಕೆಂದು ಆದೇಶಿಸಿದ್ದರು. ಆದರೆ ಹೇಗೆ ಇಳಿಸಬೇಕು, ಖಾಸಗಿ ಶಾಲೆಗಳನ್ನು ಆ ನಷ್ಟವನ್ನು ಹೇಗೆ ಭರಿಸಿಕೊಳ್ಳಬೇಕೆಂದು ಸ್ಪಷ್ಟತೆ ನೀಡಿರಲಿಲ್ಲ. ಇದರಿಂದಾಗಿ ಸಚಿವರ ಆದೇಶಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಯಿತು. ಪರಿಣಾಮವಾಗಿ ಬಡ ಹಾಗೂ ಮಧ್ಯಮ ವರ್ಗದ ಪೋಷಕರು ದಿಕ್ಕು ತೋಚದಂತಾಗಿದ್ದಾರೆ ಎಂದು ಸುರೇಶ್ ರಾಥೋಡ್ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಪ್ರೀಂಕೋರ್ಟ್ ಇಮೇಲ್‍ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಕೆಗೆ ಬ್ರೇಕ್

ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡೆ ಉಷಾ ಮೋಹನ್ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರು, ಕಂಪ್ಯೂಟರ್, ಸುಸಜ್ಜಿತ ಕೊಠಡಿ ಮುಂತಾದ ಮೂಲಸೌಕರ್ಯಗಳಿಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಸೇರಿಸಬೇಕಾಗಿದೆ. ಕೋವಿಡ್‍ನಿಂದ ತತ್ತರಿಸಿರುವ ವೇಳೆ ಅಲ್ಲಿನ ದುಬಾರಿ ಶುಲ್ಕವನ್ನು ಬಡ ಪೋಷಕರು ಹೇಗೆ ತಾನೇ ಕಟ್ಟಬಹುದು? ದೆಹಲಿಯ ಕೇಜ್ರಿವಾಲ್ ಸರ್ಕಾರವು ಸರ್ಕಾರಿ ಶಾಲೆಗಳನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿಪಡಿಸಿದೆ. ಇಲ್ಲಿನ ಸರ್ಕಾರಿ ಶಾಲೆಗಳೂ ಅಭಿವೃದ್ಧಿಯಾಗಿದ್ದರೆ ಖಾಸಗಿ ಶಾಲೆಗಳ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ನಾವು ಇಷ್ಟೊಂದು ಆಗ್ರಹಿಸುವ ಸಂದರ್ಭವೇ ಬರುತ್ತಿರಲಿಲ್ಲ. ಆದರೆ ನಮ್ಮ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ಹಾಗೂ ಶಾಲಾ ಅಭಿವೃದ್ಧಿಯು ಆದ್ಯತೆಯ ವಿಷಯವಾಗಿಲ್ಲ. ಇದನ್ನೂ ಓದಿ: ಅ.7ಕ್ಕೆ ಚಾಮರಾಜನಗರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮನ

Leave a Reply