ವಕ್ಫ್‌ ಕಾಯ್ದೆ ವಿರೋಧಿಸಿ ಹಿಂಸಾಚಾರ – ಹಿಂದೂಗಳು ಮನೆಬಿಟ್ಟು ಓಡಿಹೋಗುತ್ತಿದ್ದಾರೆಂದು ಬಿಜೆಪಿ ಆರೋಪ

– ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ; 150 ಜನರ ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ವಕ್ಫ್‌ ಕಾಯ್ದೆ (Waqf Act) ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಇವರೆಗೂ 150 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರ ಪೀಡಿತ ಮುರ್ಷಿದಾಬಾದ್‌ ಜಿಲ್ಲೆಯಾದ್ಯಂತ ವಿನಾಶದ ದೃಶ್ಯಗಳು ಕಂಡುಬಂದವು.

ವಕ್ಫ್‌ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಹಿಂಸಾತ್ಮಕ ಘಟನೆಗಳಿಂದ ಜಿಲ್ಲೆ ಉದ್ವಿಗ್ನಗೊಂಡಿದೆ. ಅರೆಸೈನಿಕ ಪಡೆಗಳು ನಿರ್ಜನ ಬೀದಿಗಳಲ್ಲಿ ಗಸ್ತು ತಿರುಗುತ್ತಿವೆ. ಇದನ್ನೂ ಓದಿ: ವಕ್ಫ್‌ ಕಾಯ್ದೆಗೆ ವಿರೋಧ, ಬಂಗಾಳ ಧಗಧಗ – 150ಕ್ಕೂ ಹೆಚ್ಚು ಮಂದಿ ಬಂಧನ

ಹೆಚ್ಚುತ್ತಿರುವ ಅಶಾಂತಿ ನಿಯಂತ್ರಣಕ್ಕೆ ಕೋಲ್ಕತ್ತಾ ಹೈಕೋರ್ಟ್ ಜಿಲ್ಲೆಯ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲು ಆದೇಶಿಸಿತು. ಹಲವಾರು ಜಿಲ್ಲೆಗಳಲ್ಲಿ ವ್ಯಾಪಕವಾದ ವಿಧ್ವಂಸಕ ಕೃತ್ಯಗಳನ್ನು ಉಲ್ಲೇಖಿಸಿದ ಕೋರ್ಟ್‌, ಪರಿಸ್ಥಿತಿ ನಿಯಂತ್ರಣಕ್ಕೆ ಆದೇಶಿಸಿದೆ.

ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಸ್ಥಳೀಯ ನಿವಾಸಿಗಳು ಮುರ್ಷಿದಾಬಾದ್‌ನಿಂದ ದೋಣಿ ಮೂಲಕ ಪಲಾಯನ ಮಾಡುತ್ತಿದ್ದಾರೆ. ಸುರಕ್ಷತೆಗಾಗಿ ನೆರೆಯ ಮಾಲ್ಡಾಕ್ಕೆ ನದಿಯನ್ನು ದಾಟಲು ಪ್ರಯತ್ನಿಸುತ್ತಿರುವ ದೃಶ್ಯಗಳು ಕಾಣಿಸಿಕೊಂಡವು. ಇದನ್ನೂ ಓದಿ: ಬಂಗಾಳದಲ್ಲಿ ವಕ್ಫ್‌ ಕಾಯ್ದೆ ವಿರೋಧಿಸಿ ಪ್ರತಿಭಟನೆ – ಘರ್ಷಣೆಯಲ್ಲಿ ಮೂವರು ಸಾವು

ಶುಕ್ರವಾರದ ಪ್ರಾರ್ಥನೆಯ ನಂತರ ಪ್ರಾರಂಭವಾದ ಹಿಂಸಾಚಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಘರ್ಷಣೆಯಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಭಾನುವಾರ, ಅಧಿಕಾರಿಗಳು ರಾತ್ರಿಯಿಡೀ ನಡೆಸಿದ ದಾಳಿಯ ನಂತರ ಹನ್ನೆರಡು ಜನರನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 150 ಕ್ಕೆ ಏರಿದೆ. ಸುಟಿ, ಧುಲಿಯನ್, ಸಂಸೇರ್‌ಗಂಜ್ ಮತ್ತು ಜಂಗಿಪುರ ಪ್ರದೇಶಗಳಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿ ಅವರದ್ದು ಓಲೈಕೆ ರಾಜಕಾರಣ ಎಂದು ಟೀಕಿಸಿದ್ದಾರೆ. ಹಿಂಸಾಚಾರದ ನಡುವೆ 400 ಕ್ಕೂ ಹೆಚ್ಚು ಹಿಂದೂಗಳನ್ನು ಮುರ್ಷಿದಾಬಾದ್‌ನಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದ್ದಾರೆ.