ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿರೋದು ಬೇಸರವಿದೆ: ಸೋಮಶೇಖರ್ ರೆಡ್ಡಿ

– ಸಿಎಂ ನಿರ್ಧಾರ ಸಂತಸ ತಂದಿದೆ
– ಸಚಿವ ಆನಂದ್ ಸಿಂಗ್‍ಗೆ ಮನವಿ

ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಇರೋದು ಬೇಸರವಿದೆ. ಇದು ಕೇವಲ ನನ್ನ ಬೇಡಿಕೆ ಅಲ್ಲ, ಬದಲಿಗೆ ನಮ್ಮ ವಾಲ್ಮೀಕಿ ಸಮುದಾಯದ ಬೇಡಿಕೆ ಎಂದು ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡಬೇಕು ಎನ್ನುವ ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಡಿಸಿಎಂ ಸ್ಥಾನವನ್ನು ರಾಮುಲು ಅವರಿಗೆ ನೀಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದರು.

ಆನಂದ್ ಸಿಂಗ್ ಅವರಿಗೆ ನೀಡಿದರೂ ನಾನು ಸಂತೋಷ ಪಡುವೆ. ಲಕ್ಷ್ಮಣ ಸವದಿ ಜಿಲ್ಲಾ ಉಸ್ತುವಾರಿ ಆಗಿ ಮುಂದುವರಿದರೂ ನಮಗೆ ಸಂತೋಷ. ಆದರೆ ಹೆಚ್ಚು ದಿನಗಳ ಕಾಲ ಲಕ್ಷ್ಮಣ ಸವದಿ ಜಿಲ್ಲೆಯಲ್ಲಿ ಇರಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಜಿಲ್ಲಾ ವಿಭಜನೆಯ ಬಗ್ಗೆ ಸಿಎಂ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೆವೆ. ಸಿಎಂ ಜಿಲ್ಲೆ ವಿಭಜನೆ ಮಾಡಲ್ಲ ಎಂಬ ಹೇಳಿಕೆ ನಮಗೆ ಸಂತಸ ತಂದಿದೆ ಎಂದಿದ್ದಾರೆ.

ಬಳ್ಳಾರಿಯ ಜಿಲ್ಲೆ ವಿಭಜನೆ ಮಾಡುವುದು ಸರಿಯಲ್ಲ. ಈ ಹಿಂದಿನಿಂದಲೂ ವಿಭಜನೆಗೆ ನಮ್ಮ ವಿರೋಧ ಇದೆ. ಹೀಗಾಗಿ ಜಿಲ್ಲಾ ವಿಭಜನೆ ಬೇಡ ಎಂದಿದ್ದೆವೆ. ಈಗಲೂ ನಾನು ಸಚಿವ ಆನಂದ್ ಸಿಂಗ್ ಅವರಲ್ಲಿ ಜಿಲ್ಲೆ ವಿಭಜನೆ ಮಾಡದೆ ನಾವೆಲ್ಲ ಅಣ್ಣ-ತಮ್ಮಂದಿರ ಹಾಗೆ ಇರಬೇಕು ಎಂದು ಮನವಿ ಮಾಡುತ್ತೇನೆ ಎಂದರು.

Comments

Leave a Reply

Your email address will not be published. Required fields are marked *