ಬಳ್ಳಾರಿ: ಶಾಸಕ ಶ್ರೀರಾಮುಲು ಮತ್ತೆ ಬಿಜೆಪಿಗೆ ಹೋಗುತ್ತಾರೆ ಅಂತಾ ಗೊತ್ತಿದ್ದರೆ, ನಮ್ಮ ಅಪ್ಪನಾಣೆ ನಾನು 2011ರ ಉಪಚುನಾವಣೆಯಲ್ಲಿ ಅವರ ಪರ ಪ್ರಚಾರ ಮಾಡುತ್ತಿರಲಿಲ್ಲ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.
ಜಿಲ್ಲೆಯ ಕೌಲಬಜಾರನಲ್ಲಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕೋಮುವಾದಿ ಪಕ್ಷಕ್ಕೆ ಮತ್ತೆಂದು ಹೋಗುವುದಿಲ್ಲ ಅಂತಾ ಶಾಸಕ ಶ್ರೀರಾಮುಲು ಹೇಳಿದ್ದರು. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಲಹೆಯಂತೆ 2011ರ ಉಪಚುನಾವಣೆಯಲ್ಲಿ ಶ್ರೀರಾಮಲು ಪರ ಪ್ರಚಾರ ಮಾಡಿದ್ದೆ. ಆದರೆ ಶ್ರೀರಾಮುಲು ಮಾತಿಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಅವರೊಬ್ಬ ಸುಳ್ಳು ಹೇಳುವ ರಾಜಕಾರಣಿ ಎಂದು ದೂರಿದರು.

ಒಂದು ವೇಳೆ ಶ್ರೀರಾಮುಲು ಮತ್ತೆ ಬಿಜೆಪಿ ಸೇರುತ್ತಾರೆ ಅಂತಾ ಅವತ್ತೇ ಗೊತ್ತಾಗಿದ್ದರೆ ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಅವರ ವಿರುದ್ಧ ಪ್ರಚಾರ ಮಾಡುವುದಕ್ಕೆ ನನಗೆ ಈಗ ಅವಕಾಶ ಕೂಡಿ ಬಂದಿದೆ. ಅವಕಾಶವಾದಿ ರಾಜಕಾರಣ ಮಾಡುವವರನ್ನು ಯಾರೂ ನಂಬುವುದಿಲ್ಲ. ಶ್ರೀರಾಮುಲು ಅವರ ಬಗ್ಗೆ ನಂಬಿಕೆ ಕಳೆದಕೊಂಡಿದ್ದೇವೆ ಅಂತಾ ಜಿಲ್ಲೆಯ ಜನರೇ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವರು, ಶ್ರೀರಾಮುಲು ಅಥವಾ ನಾಯಕ ಸಮುದಾಯವನ್ನು 420 ಅಂತಾ ಮಾಜಿ ಸಿದ್ದರಾಮಯ್ಯ ಅವರು ಹೇಳಿಲ್ಲ. ಶ್ರೀರಾಮುಲು ಅವರಿಗೆ 371 ಜೆ ಬಗ್ಗೆ ಗೊತ್ತಿಲ್ಲವೆಂದು ಲೇವಡಿ ಮಾಡಿದ್ದಾರೆ ಎಂದ ಅವರು, ಕೇವಲ ಒಂದೇ ಜನಾಂಗದ ಮತಗಳಿಂದ ಜಯ ಗಳಿಸಲು ಸಾಧ್ಯವಿಲ್ಲ. ಎಲ್ಲ ಜನಾಂಗದವರು ಬೇಕಾಗುತ್ತಾರೆ ಎಂದು ಟಾಂಗ್ ಕೊಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply