ಗಂಡ ಬಿಜೆಪಿ ಲೋಕಸಭಾ ಅಭ್ಯರ್ಥಿ – ಹೆಂಡ್ತಿ ಕಾಂಗ್ರೆಸ್ ಕಟ್ಟಾಳು!

– ಬಳ್ಳಾರಿ ಕದನ ಕಣದಲ್ಲಿ ವಿಶಿಷ್ಟ ಪರಿಸ್ಥಿತಿ

ಬಳ್ಳಾರಿ: ಗಣಿನಾಡಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಕಾವು ಏರುತ್ತಿದ್ದಂತೆ ಚುನಾವಣಾ ಕಾವು ಕೂಡ ಹೆಚ್ಚಾಗ್ತಿದೆ. ಜಿಲ್ಲೆಯಲ್ಲಿ ಪತ್ನಿ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರಾದರೆ, ಪತಿ ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಜನ ಯಾರನ್ನೂ ನಂಬಿ ಮತ ಹಾಕಬೇಕು ಎಂದು ಗೊಂದಲದಲ್ಲಿದ್ದಾರೆ.

ಅಣ್ಣ ಒಂದು ಪಕ್ಷದಲ್ಲಿದ್ದರೆ ತಮ್ಮ ಇನ್ನೊಂದು ಪಕ್ಷದಲ್ಲಿರೋದು ಸಾಮಾನ್ಯ. ಆದ್ರೆ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲೀಗ ಪತಿ-ಪತ್ನಿಯ ಜುಗಲ್‍ಬಂಧಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅರಸಿಕೇರಿ ದೇವೇಂದ್ರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಆದ್ರೆ ದೇವೇಂದ್ರಪ್ಪ ಪತ್ನಿ ಸುಶೀಲಮ್ಮ ಬಳ್ಳಾರಿ ಜಿಲ್ಲಾ ಪಂಚಾಯತ್‍ನಲ್ಲಿ ಕಾಂಗ್ರೆಸ್ ಸದಸ್ಯೆ. ಇದು ಮತದಾರರನ್ನು ಗೊಂದಲಕ್ಕೀಡು ಮಾಡಿದೆ.

ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಅರಸಿಕೇರಿ ದೇವೇಂದ್ರಪ್ಪ ಅವರನ್ನು ಕೇಳಿದ್ರೆ, ಅವರನ್ನೇ ಕೇಳಬೇಕು. ಈ ಪ್ರಜಾಪ್ರಭುತ್ವದಲ್ಲಿ ಅವರಿಗೂ ಹಕ್ಕು ಇದೆ ಎಂದು ಹೇಳುತ್ತಿದ್ದಾರೆ. ಇತ್ತ ಇದುವರೆಗೂ ಕಾಂಗ್ರೆಸ್‍ನಲ್ಲಿದ್ದುಕೊಂಡು ಚುನಾವಣೆ ಬರುತ್ತಿದ್ದಂತೆ ಬಿಜೆಪಿಗೆ ಜಿಗಿದ ದೇವೇಂದ್ರಪ್ಪರ ಬಗ್ಗೆ ಕಾಂಗ್ರೆಸ್ ನಾಯಕರು ಸಹ ಹರಿಹಾಯುತ್ತಿದ್ದಾರೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನನ್ನ ಸ್ನೇಹಿತರಾದ ಶ್ರೀರಾಮುಲು ಅಣ್ಣ ಸೇರಿ ಬಿಜೆಪಿಯ ಒಂದು ಕಾರ್ಯಕರ್ತನನ್ನು ಹುಡುಕಿ ಅವನನ್ನು ನಾಯಕನನ್ನಾಗಿ ಮಾಡಕ್ಕಾಗಿಲ್ಲ ಎಂಬ ವ್ಯಥೆ ನನ್ನ ಕಾಡುತ್ತಿದೆ. ನಮ್ಮ ಶ್ರೀರಾಮುಲು ಅಣ್ಣನಿಗೆ ಚಿಂತೆ ಮಾಡಕ್ಕಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿಯೇ ಬೇಕಾಗಿತ್ತಾ ನಿಮಗೆ ಎಂದು ಪ್ರಶ್ನಿಸಿದ ಅವರು, ಪಾಪ ದೇವೇಂದ್ರಪ್ಪ ಅವರು ದೇವರು ಇದ್ದಂಗೆ ಇರಲಿ ಎಂದಿದ್ದಾರೆ.

ಒಟ್ಟಿನಲ್ಲಿ ಪತಿ- ಪತ್ನಿ ಬೇರೆ ಬೇರೆ ಪಕ್ಷದಲ್ಲಿರೋದ್ರಿಂದ ಮತದಾರರಿಗೆ ಗೊಂದಲವೋ ಗೊಂದಲ. ಯಾರು ಯಾರ ಪರವಾಗಿ ಪ್ರಚಾರ ಮಾಡ್ತಾರೆ? ಕಾಂಗ್ರೆಸ್‍ನಲ್ಲಿ ಸದಸ್ಯರಾಗಿದ್ದುಕೊಂಡು ಪತಿಯ ಪರವಾಗಿ ಪತ್ನಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಾರಾ ಎನ್ನುವ ಗೊಂದಲದಲ್ಲಿ ಮತದಾರರು ಇದ್ದಾರೆ.

Comments

Leave a Reply

Your email address will not be published. Required fields are marked *