ಸಾಲ ಮನ್ನಾ ನೀತಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧರಾದ ರೈತರು

ಬಳ್ಳಾರಿ: ಸಮ್ಮಿಶ್ರ ಸರ್ಕಾರದ ಸಾಲ ಮನ್ನಾ ನೀತಿಯನ್ನು ವಿರೋಧಿಸಿ ಗಣಿನಾಡಿನ ರೈತರು ಸರ್ಕಾರಕ್ಕೆ ಸೆಡ್ಡು ಹೊಡೆಯಲು ಸಿದ್ಧರಾಗಿದ್ದು, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ನೂರಾರು ರೈತರು ಕೋರ್ಟ್ ಮೆಟ್ಟಿಲು ಏರಲು ಸಿದ್ಧರಾಗಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೊನ್ನೆ ಮಂಡಿಸಿದ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದು, ಆದರೆ ಸರ್ಕಾರದ ಮಾಡಿದ ಸಾಲ ಮನ್ನಾದಿಂದ ಪ್ರಾಮಾಣಿಕ ರೈತನಿಗೆ ಯಾವುದೇ ಅನುಕೂಲ ಇಲ್ಲದಂತಾಗಿದೆ. ಅದ್ದರಿಂದ ನೂರಾರು ರೈತರು ಒಟ್ಟಿಗೆ ಸೇರಿ ಸಾಲ ಮನ್ನಾ ನೀತಿಯ ವಿರುದ್ಧ ನ್ಯಾಯಾಲಯ ಮೆಟ್ಟಿಲು ಏರಲು ಸಿದ್ಧರಾಗಿದ್ದಾರೆ.

ಹತ್ತು ಹಲವು ಷರತ್ತುಗಳನ್ನ ವಿಧಿಸಿ ಸಾಲಮನ್ನಾ ಘೋಷಣೆ ಮಾಡಲಾಗಿದೆ. ಅದರಲ್ಲೂ ಸುಸ್ತಿದಾರ ಸಾಲಗಾರನಿಗೆ ಮಾತ್ರ ಈ ಯೋಜನೆ ಅನ್ವಯವಾಗುವುದು ನಮಗೆ ತುಂಬಾ ನೋವು ತಂದಿದೆ, ಏಕೆಂದರೆ ಈ ಹಿಂದೆ ನಾವು ಬ್ಯಾಂಕ್ ಗಳಲ್ಲಿ ಸಾಲ ಮಾಡಿದರೆ ಮನೆಯಲ್ಲಿ ತಿನ್ನುವುದಕ್ಕೆ ಅನ್ನ ಇಲ್ಲದಿದ್ದರು ಸಾಲ ಮರುಪಾವತಿ ಮಾಡಿ ಋಣ ಮುಕ್ತರಾಗಲು ಪ್ರಯತ್ನಿಸುತ್ತಿದ್ದೇವು . ಆದರೆ ಸರ್ಕಾರ ನೀವು ಬ್ಯಾಂಕ್ ಗಳಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಬೇಡಿ ಎಂದು ಹೇಳಿಕೊಟ್ಟಂತಿದೆ ಎಂದು ಸರ್ಕಾರದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯಾವುದೇ ಒಂದು ಯೋಜನೆಯನ್ನು ಅನುಷ್ಠಾನ ಮಾಡದೆ ರಾಜ್ಯದ ಜನ ಸಾಮಾನ್ಯರಿಗೆ ಸಿಎಂ ಕುಮಾರಸ್ವಾಮಿ ಅವರು ಅನ್ಯಾಯ ಮಾಡುತ್ತಿದ್ದಾರೆ. ಸಾಲಮನ್ನಾ ನೀತಿಯನ್ನು ಇನ್ನೆರಡು ದಿನಗಳಲ್ಲಿ ಬದಲಿಸದಿದ್ದರೆ ಮುಖ್ಯಮಂತ್ರಿಗಳು ನ್ಯಾಯಾಲಯದಲ್ಲಿ ಬಂದು ನಿಲ್ಲಬೇಕಾಗುತ್ತೆ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *