ಮಗುವಿದ್ದರೂ ಲವರ್ ಹಿಂದೆ ಬಿದ್ದ ಪುತ್ರಿ- ಕತ್ತು ಹಿಸುಕಿ ಕೊಂದ ತಂದೆ

– ಅನಾಥವಾಯ್ತು ಆರು ತಿಂಗಳ ಮಗು

ಬಳ್ಳಾರಿ: ಮದುವೆಯಾಗಿ ಆರು ತಿಂಗಳ ಮಗು ಇದ್ದರು ಹಳೆ ಲವರ್ ಹಿಂದೆ ಬಿದಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ಗೋಡೆಹಾಳ ಗ್ರಾಮದ ನಿವಾಸಿ ಗೋಪಾಲ ರೆಡ್ಡಿ ತನ್ನ ಮಗಳನ್ನೇ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಮೃತ ಮಗಳನ್ನು ಕವಿತಾ (23) ಎಂದು ಗುರುತಿಸಲಾಗಿದೆ. ಮದುವೆ ಮಾಡಿದರು ಊರಿಗೆ ಬಂದಾಗ ಹಳೆ ಲವರ್ ಜೊತೆ ಹೋಗುತ್ತಾಳೆ ಎಂದು ತಂದೆಯೆ ಕವಿತಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಕವಿತಾ 18ನೇ ವಯಸ್ಸಿನಲ್ಲಿಯೇ ಪ್ರೀತಿ ಪ್ರೇಮದ ಹಿಂದೆ ಬಿದ್ದಿದ್ದಳು. ಗ್ರಾಮದ ಯುವಕನೊಬ್ಬನ ಹಿಂದೆ ಸುತ್ತಾಡುತ್ತಿರುವುದನ್ನು ಕಂಡ ಕುಟುಂಬಸ್ಥರು ಕವಿತಾಳನ್ನು ಜಿಂದಾಲ್ ಉದ್ಯೋಗಿ ತೋರಣಗಲ್ ನಿವಾಸಿ ಮಣಿಪಾಲ್ ರೆಡ್ಡಿ ಎನ್ನುವವರಿಗೆ ಕೊಟ್ಟು ಕಳೆದ ನಾಲ್ಕು ವರ್ಷದ ಹಿಂದೆ ಮದುವೆ ಮಾಡಿದ್ದರು. ಆದರೆ ತನ್ನ ಹಳೇ ಪ್ರೇಮಿಯನ್ನು ಬಿಟ್ಟಿರದ ಕವಿತಾ ಊರಿಗೆ ಬಂದಾಗ ಅವನ ಹಿಂದೆ ಹೋಗುತ್ತಿದ್ದಳು.

ನಿನಗೆ ಮದುವೆಯಾಗಿದೆ ಆತನ ಜೊತೆ ಹೋಗಬೇಡ ಎಂದು ಎಷ್ಟು ಬುದ್ಧಿ ಹೇಳಿದರು ಕವಿತಾ ಕೇಳುತ್ತಿರಲಿಲ್ಲ. ಇಷ್ಟು ದಿನ ಕದ್ದು ಮಚ್ಚಿ ಇದ್ದ ಇವರ ಅನೈತಿಕ ಸಂಬಂಧ ಕೆಲ ದಿನಗಳ ಹಿಂದೆ ಬಹಿರಂಗವಾಗಿತ್ತು. ಕಳೆದ ತಿಂಗಳು ಕವಿತಾ ಗಂಡನ ಮನೆ ಬಿಟ್ಟು ನೇರವಾಗಿ ಹಳೆ ಲವರ್ ಪ್ರಕಾಶನ ಜೊತೆ ಹೋಗಿದ್ದಳಂತೆ. ಇದರಿಂದ ಮತ್ತೊಮ್ಮೆ ಕುಟುಂಬ ಸದಸ್ಯರು ಮದುವೆಯಾದ ಬಳಿಕ ಹೀಗೆ ಮಾಡಬಾರದೆಂದು ಬುದ್ಧಿ ಮಾತನ್ನು ಹೇಳಿ ಮನೆಗೆ ಕರೆದು ಕೊಂಡು ಬಂದಿದ್ದರಂತೆ. ಆದರೆ ಇದ್ಯಾವುದಕ್ಕೂ ಜಗ್ಗದೆ ಹಳೇ ಲವರ್ ಕೂಡ ಮತ್ತೆ ಮತ್ತೆ ಕವಿತಾಳನ್ನು ಸಂಪರ್ಕ ಮಾಡಲು ಮನೆ ಹತ್ತಿರ ಬರುತ್ತಿದ್ದ ಎನ್ನಲಾಗಿದೆ.

ಮಗಳ ಈ ನಡೆಯಿಂದ ಬೇಸತ್ತಿದ್ದ ತಂದೆ ಗೋಪಾಲ ರೆಡ್ಡಿ, ಸೋಮವಾರ ಮನೆಯಲ್ಲಿ ಕವಿತಾಳ ಕತ್ತು ಹಿಸುಕಿ ಕೊಂದು ಶವವನ್ನು ಹೊಲಕ್ಕೆ ತಂದು ಎಸೆದಿದ್ದಾನೆ. ಆದರೆ ಕವಿತಾಳ ಆರು ತಿಂಗಳ ಮಗು ಇದೀಗ ಅನಾಥವಾಗಿದೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪರಮದೇವನಹಳ್ಳಿ ಪೊಲೀಸರು ಘಟನೆಯಲ್ಲಿ ತಂದೆ ಗೊಪಾಲ ರೆಡ್ಡಿ ಮಾತ್ರ ಕೊಲೆ ಮಾಡಿದ್ದೀರಾ ಅಥವಾ ಮನೆಯವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರಾ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *