ಹೌದು ಹುಲಿಯಾ ಎಂದು ಹೇಳಿ ಕ್ರೀಡಾಪಟುಗಳಿಗೆ ಹುರಿದುಂಬಿಸಿದ ಸಿಟಿ ರವಿ

ಬಳ್ಳಾರಿ: ಹಂಪಿ ಉತ್ಸವ-2020 ನಿಮಿತ್ತ ಮಲಪನಗುಡಿಯ ವಿದ್ಯಾರಣ್ಯ ಪೀಠದ ಹೈಸ್ಕೂಲ್ ಮೈದಾನದಲ್ಲಿ ಎರಡನೇ ದಿನವಾದ ಇಂದು ನವಿರೇಳಿಸುವ ರೀತಿಯಲ್ಲಿ ಗುಂಡು ಎತ್ತುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲೋಳಿ ಗ್ರಾಮದ ಇಬ್ರಾಹಿಂ ಮಕ್ಬುಲ್‍ಸಾಬ್ ಅರಬ್ ಅವರು 160 ಕೆ.ಜಿ.ಭಾರದ ಕಲ್ಲನ್ನು ಎತ್ತಿ ಸತತ 8ನೇ ಬಾರಿಗೆ ಪ್ರಥಮ ಸ್ಥಾನ ಗಳಿಸಿದರು.

ಇಬ್ರಾಹಿಂ ಅವರು ಕಲ್ಲು ಎತ್ತುವ ಅಂಗಳಕ್ಕೆ ಬರುತ್ತಲೇ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಮೊಣಕಾಲವರೆಗೆ ಕಲ್ಲು ಎತ್ತುತ್ತಿದ್ದಂತೆ ಸಚಿವ ಸಿಟಿ ರವಿ ಅವರು ಹೌದೋ ಹುಲಿಯಾ ಹೌದೋ ಭೀಮ ಎಂದು ಕೂಗಿ ಪ್ರೋತ್ಸಾಹಿಸಿದರು. ಇದಾದ ಕೆಲವೇ ಸೆಕೆಂಡುಗಳಲ್ಲಿ ಬರೋಬ್ಬರಿ 160 ಕೆ.ಜಿ ಭಾರದ ಕಲ್ಲು ಇಬ್ರಾಹಿಂ ಅವರ ಭುಜದ ಮೇಲೆ ಬಂದಿತ್ತು. ಒಂದೇ ಒಂದ ಸಲವೂ ಕೆಳಗೆ ಒಗೆಯದೇ ಒಂದೇ ಪ್ರಯತ್ನದಲ್ಲಿ ಕಲ್ಲು ಎತ್ತಿದ ಇಬ್ರಾಹಿಂ ಮಕ್ಬುಲ್‍ಸಾಬ್ ಅರಬ್ ಅವರ ಸಾಹಸ ಕಂಡು ಜನರು ಚಪ್ಪಾಳೆ ತಟ್ಟಿದರು. ಆಧುನಿಕ ಭೀಮ ಖ್ಯಾತಿಗೆ ಭಾಜನವಾದರು.

ಇಬ್ರಾಹಿಂ ಮಕ್ಬುಲ್‍ಸಾಬ್ ಅರಬ್ ಅವರ ವಯಸ್ಸು ಕೇವಲ 29. ಇವರು ಮನೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಕ್ರೀಡಾ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

Comments

Leave a Reply

Your email address will not be published. Required fields are marked *