ಬಳ್ಳಾರಿಯಲ್ಲಿ ಕೊರೊನಾದಿಂದ ಮೂವರು ಗುಣಮುಖ – ಇಂದು ಡಿಸ್ಚಾರ್ಜ್

ಬಳ್ಳಾರಿ: ಮಹಾಮಾರಿ ಕೊರೊನಾ ವೈರಸ್ ಬಾಧಿತರಾಗಿ ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿಯ ಪೈಕಿ ಮೂವರು ಗುಣಮುಖರಾಗಿದ್ದು, ಇಂದು ಡಿಸ್ಚಾರ್ಜ್ ಆಗಲಿದ್ದಾರೆ.

ಜಿಲ್ಲಾಮಟ್ಟದ ಕೋವಿಡ್-19 ಸಲಹಾ ಸಮಿತಿ ನಿರ್ಣಯದ ಅನುಸಾರ ಈ ಮೂವರನ್ನು ಇಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಜಿಲ್ಲಾಮಟ್ಟದ ಟಾಸ್ಕ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.

ಪಿ-89, ಪಿ-91 ಮತ್ತು ಪಿ-141 ಕೊರೊನಾ ಸೊಂಕಿತ ರೋಗಿಗಳಿಗೆ ಸಂಬಂಧಿಸಿದಂತೆ ಕೋವಿಡ್-19 ಟೆಸ್ಟ್ ಗಳನ್ನು ಮಾಡಲಾಗಿದ್ದು, ಇವರ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಈ ಪರೀಕ್ಷೆಯ ವರದಿಯ ಆಧಾರದ ಮೇರೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಶಾಸ್ತ್ರ ವಿಭಾಗದ ವೈದ್ಯರು ರೋಗಿಗಳಿಗೆ ಫಿಟ್ ಇರುವುದಾಗಿ ಒಪ್ಪಿದೆಯೆಂದು ತಿಳಿಸಿದ್ದರಿಂದ ಡಿಸ್ಟಾರ್ಚ್ ಮಾಡಲು ನಿರ್ಧರಿಸಲಾಗಿದೆ.

ಇವರನ್ನು ಇಂದು ಬೆಳಗ್ಗೆ ಕೋವಿಡ್ ಆಸ್ಪತ್ರೆಯಿಂದ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿ, ಜಿಲ್ಲಾಧಿಕಾರಿ, ಎಸ್‍ಪಿ, ಜಿ.ಪಂ ಸಿಇಒ ಅವರ ಸಮ್ಮುಖದಲ್ಲಿ ಚಪ್ಪಾಳೆ ತಟ್ಟಿ ಅಭಿನಂದಿಸುವ ಮೂಲಕ ಬಿಡುಗಡೆ ಮಾಡಲಿದ್ದಾರೆ. ಅಲ್ಲದೇ 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಇರಲು ಸೂಚನೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *