ನಾವು ಊದಿದ್ರೆ ನೀವೆಲ್ಲ ಹಾರಿ ಹೋಗ್ತೀರಿ, ಸಿಎಎ ವಿರೋಧಿಗಳನ್ನು ಶೂಟ್ ಮಾಡ್ಬೇಕು – ಸೋಮಶೇಖರ ರೆಡ್ಡಿ

ಬಳ್ಳಾರಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಮಾಡಿದ ಎಲ್ಲರನ್ನೂ ಶೂಟ್ ಮಾಡಿದ್ದರೆ ಅನುಕೂಲ ಆಗಿರೋದು. ದೇಶದ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು. ನೀವು ನಮ್ಮ ದೇಶದಲ್ಲಿ ಇರಬೇಕು ಅಂದ್ರೆ ನಾವು ಹೇಳಿದ ಹಾಗೆ ಕೇಳಬೇಕು ಎನ್ನುವ ಮೂಲಕ ಶಾಸಕ ಸೋಮಶೇಖರ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿರುವ ಶಾಸಕ ಸೋಮಶೇಖರ ರೆಡ್ಡಿ, ಪೌರತ್ವ ಕಾಯ್ದೆಯನ್ನು ವಿರೋಧಿಸುವವರು ಜಾಸ್ತಿ ನಕ್ರಾ ಮಾಡಿದರೆ ಸರಿ ಇರಲ್ಲ. ನಾವು ಶೇ.80 ರಷ್ಟು ಜನ ಇದ್ದೇವೆ. ಹಿಂದುಗಳು ಖಡ್ಗ ಹಿಡಿದುಕೊಂಡು ಬಂದರೆ ನಿಮಗೇ ಕಷ್ಟವಾಗುತ್ತದೆ. ಸಿಎಎ ವಿರೋಧಿಸಿದರೆ ರೊಚ್ಚಿಗೇಳಬೇಕಾಗುತ್ತದೆ. ನಾವು ಶೇ.80ರಷ್ಟು ಜನರಿದ್ದೇವೆ. ನೀವು ಕೇವಲ ಶೇ.17 ರಷ್ಟಿದ್ದೀರಿ. ನಾವು ಉಫ್ ಎಂದು ಊದಿದರೆ ನೀವೆಲ್ಲ ಹಾರಿ ಹೋಗುತ್ತೀರ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರಿಗೆ ಮತ್ತು ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ.

ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಈ ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ. ಕಾಂಗ್ರೆಸ್ ಪಕ್ಷದ ಬೇಕೂಫ್‍ಗಳು ಹೇಳುವುದನ್ನು ಕೇಳಿ ನೀವು ಬೀದಿಗೆ ಇಳಿಯಬೇಡಿ. ನಾವು ಶೇ.80 ರಷ್ಟಿದ್ದೇವೆ. ನಾವು ತಿರುಗಿ ಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಎಂಬ ಎಚ್ಚರವಿರಲಿ. ಇದು ನಮ್ಮ ದೇಶ ಎಂಬುದನ್ನು ಮರೆಯಬೇಡಿ. ನೀವು ನಮ್ಮ ದೇಶದಲ್ಲಿ ಇರಬೇಕಾದರೆ ನಮ್ಮ ಪದ್ಧತಿ ಪ್ರಕಾರ ಇರಬೇಕು. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಿದರೆ ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದಾರೆ.

ಯಾಕೆ ಇಲ್ಲಿ ನಿಮಗೆ ಬಾಂಗ್ಲಾ ಮತ್ತು ಪಾಕಿಸ್ತಾನದ ಹುಳಾ ಕಡಿಯತ್ತಾ? ನಿಮಗೆ ಈ ಕಾಯ್ದೆ ಜಾರಿಗೆ ತಂದರೆ ಯಾಕೆ ನೋವಾಗುತ್ತೆ. ನಿಮಗೆ ಏನಾದರೂ ನೋವು ಆದರೆ ನಮ್ಮ ಹಿಂದೂ ಡಾಕ್ಟರ್ ಇದ್ದಾರೆ ಸರಿಯಾಗಿ ಮಾಡಿ ಕಳಿಸುತ್ತಾರೆ. ಈ ನೆಲದಲ್ಲಿ ನಾವು ಹೇಳಿದ ಹಾಗೆ ಕೇಳಬೇಕು ಎನ್ನುವ ಮೂಲಕ ರೆಡ್ಡಿ ಅವರು ಆರಿದ ಬೆಂಕಿಗೆ ಮತ್ತೆ ಕಿಡಿ ಹಚ್ಚಿದ್ದಾರೆ.

Comments

Leave a Reply

Your email address will not be published. Required fields are marked *