ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ಬೆಳಗಾವಿ ಕುವರಿಯ ಮಿಂಚು!

ಬೆಳಗಾವಿ: ಆರ್ಥಿಕ ಸಂಕಷ್ಟದ ನಡುವೆಯೂ ದೇಶದ ಪರವಾಗಿ ಸ್ಪೇನ್‍ಗೆ ತೆರಳಿದ್ದ ಕುಂದಾನಗರಿಯ ಬೆಳಗಾವಿ ಕುವರಿ ಅಂತಾರಾಷ್ಟ್ರೀಯ ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ.

ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೇರಣಾ ಗೋನ್ಬಾರೆ ಈ ಸಾಧನೆ ಮಾಡಿರುವ ಸಾಧಕಿ. ಚಿರ್ಲ್ಡ್ ನ್ ಸೋಲೋ ಶೋ ಡ್ಯಾನ್ಸ್ ವಿಭಾಗದಲ್ಲಿ ಪ್ರೇರಣಾ 8ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ನಗರದ ಗಣೇಶಪುರದಲ್ಲಿರುವ ಸ್ಟೈಲ್ ಡ್ಯಾನ್ಸ್ ಅಕಾಡೆಮಿಯಲ್ಲಿ ಕಳೆದ ಐದು ವರ್ಷಗಳಿಂದ ಪ್ರೇರಣಾ ನೃತ್ಯ ತರಬೇತಿ ಪಡೆಯುತ್ತಿದ್ದರು. ನೃತ್ಯ ಶಿಕ್ಷಕ ಮಹೇಶ್ ಜಾಧವ್ ಇವರಿಗೆ ತರಬೇತಿ ನೀಡಿದ್ದರು. ಕಳೆದ ಜೂನ್ 22ರಂದು ಸ್ಪೇನ್‍ನ ಬಾರ್ಸಿಲೋನಾ ನಗರದಲ್ಲಿ ನಡೆದಿದ್ದ ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ 45 ದೇಶಗಳಿಂದ ಒಟ್ಟು 5,600 ನೃತ್ಯಪಟುಗಳು ಪಾಲ್ಗೊಂಡಿದ್ದರು.

ಭಾರತ ದೇಶ ಪ್ರತಿನಿಧಿಯಾಗಿ ಬೆಳಗಾವಿಯ ಪ್ರೇರಣಾ ಗೋನ್ಬಾರೆ ಪಾಲ್ಗೊಂಡಿದ್ದರು. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಆಡಿಷನ್‍ನಲ್ಲಿ ಪ್ರೇರಣಾ ಪಾಲ್ಗೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಸ್ಪೇನ್‍ಗೆ ತೆರಳಲು ಆರ್ಥಿಕ ಸಂಕಷ್ಟ ಎದುರಾದಾಗ ಸ್ನೇಹಿತರು ಹಣ ಸಂಗ್ರಹಿಸಿ ನೀಡಿದ್ದರು.

ಸ್ನೇಹಿತರ ಸಹಕಾರದಿಂದ ಸ್ಪೇನ್‍ಗೆ ತೆರಳಿದ್ದ ಪ್ರೇರಣಾ ಹಿಂದಿ, ತೆಲಗು ಹಾಗೂ ಮರಾಠಿ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ನೃತ್ಯ ಶಿಕ್ಷಕ ಮಹೇಶ್ ಜಾಧವ್, ಇಂಗ್ಲೇಂಡ್‍ನ ಜಾರ್ಜ್ ಶ್ರೀಮ್‍ಶಾ ಎಂಬುವವರು ಪ್ರತಿ ವರ್ಷ ಡ್ಯಾನ್ಸ್ ವರ್ಲ್ಡ್ ಕಪ್ ನೃತ್ಯ ಸ್ಪರ್ಧೆ ಆಯೋಜಿಸುತ್ತಾರೆ.

ಈ ಬಾರಿ ಸ್ಪೇನ್ ದೇಶದಲ್ಲಿ ಈ ನೃತ್ಯ ಸ್ಪರ್ಧೆ ನಡೆಸಲಾಗಿತ್ತು. ದೇಶದ ಪ್ರತಿನಿಧಿಯಾಗಿದ್ದ ಬೆಳಗಾವಿಯ ಪ್ರೇರಣಾ ಅದ್ಭುತ ಪ್ರದರ್ಶನ ತೋರಿದ್ದು, ಮುಂದಿನ ಸಲ ಟ್ರೋಫಿ ಪಡೆಯಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *