ರೆಡ್‍ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರ: ಲಕ್ಷ್ಮಣ ಸವದಿ

ಬೆಳಗಾವಿ: ರೆಡ್ ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರಕ್ಕೆ ಅನುಮತಿ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ತಾಲೂಕುವಾರು ಕೊರೊನಾ ಹಾಟ್‍ಸ್ಟಾಟ್‍ಗಳನ್ನು ಗುರುತಿಸಲಾಗಿದೆ. ಕೊರೊನಾ ಸೋಂಕು ಇರುವ ತಾಲೂಕುಗಳಲ್ಲಿ ಸಾರಿಗೆ ಸಂಚಾರ ಇರುವುದಿಲ್ಲ. ಅವುಗಳನ್ನು ಬಿಟ್ಟು ಉಳಿದ ತಾಲೂಕುಗಳಲ್ಲಿ ಗ್ರಾಮೀಣ ಭಾಗಕ್ಕೂ ಸೇರಿ ಸಾರಿಗೆ ವ್ಯವಸ್ಥೆಯನ್ನು ಮೇ 4ರಿಂದ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ವಲಸೆ ಕಾರ್ಮಿಕರಿಂದ ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ದುಪ್ಪಟ್ಟು ದರ ವಸೂಲಿ ವಿಚಾರವಾಗಿ ಮಾತನಾಡಿದ ಅವರು, ಇದು ತಪ್ಪು ಕಲ್ಪನೆಯಿಂದ ಆಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಸಿಂಗಲ್ ಫೇರ್ ತಗೆದುಕೊಂಡು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಸ್‍ನಲ್ಲಿ ಕಡಿಮೆ ಜನರನ್ನು ಕಳಿಸಬೇಕಾಗುತ್ತೆ. ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ವಾಪಸ್ ಬರುವಾಗ ಖಾಲಿ ಬರಬೇಕಾಗುತ್ತೆ. ಆದರೂ ಈ ಹೊರೆ ಸಹಿಸಿಕೊಂಡು ನಿಗದಿತ ದರವನ್ನು ಪಡೆಯಲಾಗುತ್ತೆ ಎಂದರು.

ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ವಿಚಾರವಾಗಿ ಮಾತನಾಡಿದ ಸವದಿ, ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಕೊರೊನಾದಿಂದ ಇಡೀ ವಿಶ್ವಕ್ಕೆ ಕಂಟಕವಾಗಿದೆ. ಇದು ಎಲ್ಲರೂ ಕೂಡ ಹೊರಬೇಕಾಗಿರುವ ಭಾರ, ಸ್ವಲ್ಪ ಸಹಿಸಿಕೊಳ್ಳಬೇಕಾಗುತ್ತೆ ಎಂದು ಹೇಳುವ ಮೂಲಕ ಕಾರ್ಮಿಕರಿಗೆ ಉಚಿತ ಪ್ರಯಾಣ ಅಸಾಧ್ಯ ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿ ತಿಳಿಸಿದರು.

Comments

Leave a Reply

Your email address will not be published. Required fields are marked *