ತಳಿರು ತೋರಣ, ಶಾಮಿಯಾನ ಹಾಕಿ ಮಳೆಗಾಗಿ ಗ್ರಾಮಸ್ಥರಿಂದ ಕತ್ತೆಗಳ ಮದುವೆ

ಬೆಳಗಾವಿ: ಮಳೆ ಬರಲಿ ಎಂದು ಕೆಲ ಜನ ದೇವರ ಮೊರೆ ಹೋದರೆ, ಇನ್ನೂ ಕೆಲವರು ವಿಶಿಷ್ಟವಾಗಿ ಕಪ್ಪೆ ಮದುವೆ, ಕತ್ತೆಗಳ ಮದುವೆ ಮಾಡಿಸಿ ಮಳೆರಾಯನ ಬರುವಿಕೆಗೆ ಕಾಯುತ್ತಿದ್ದಾರೆ.

ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

ಶಾಮಿಯಾನ ಹಾಕಿ ತಳಿರು ತೋರಣದ ಅಲಂಕಾರ ಮಾಡಿ ಮದುಮಗ-ಮದುವಣಗಿತ್ತಿಯರಂತೆ ಕತ್ತೆಗಳನ್ನು ಸಿಂಗರಿಸಿ ಮದುವೆ ಮಾಡಿಸಿದ್ದಾರೆ. ಕತ್ತೆಗಳಿಗೆ ಬಾಸಿಂಗ ಕಟ್ಟಿ, ಆರತಿ ಬೆಳಗಿ ಮಂತ್ರಘೋಷಗಳ ಜೊತೆಗೆ, ವಾದ್ಯಮೇಳ ತರಿಸಿ ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿ ಮಳೆ ಬರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.

ಮದುವೆಗೆ ಬಂದವರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಈ ಹಿಂದೆಯೂ ಇದೇ ರೀತಿಯ ಬರಗಾಲ ಬಂದಾಗ ಕತ್ತೆಗಳ ಮದುವೆ ಮಾಡಿಸಿದ್ದಕ್ಕೆ ಮಳೆ ಬಂದಿತ್ತು. ಆದರಂತೆ ಈ ಬಾರಿಯೂ ಕೊಟ್ಟಲಗಿ ಗ್ರಾಮಸ್ಥರು ಹಳೆಯ ಸಂಪ್ರದಾಯ ಮುಂದುವರಿಸಿ ಕತ್ತೆಗಳ ಮದುವೆ ಮಾಡಿಸಿದ್ದಾರೆ.

Comments

Leave a Reply

Your email address will not be published. Required fields are marked *