ದೇಶಕ್ಕೇ ಮಾದರಿಯಾದ ಉಡುಪಿಯ ಬೆಳಪು ಗ್ರಾಮ ಪಂಚಾಯ್ತಿ – ರಾಜಕೀಯ ರಾಡಿಯಿಂದ ಸಂಪೂರ್ಣ ದೂರ

ಉಡುಪಿ: ಹಳ್ಳಿಗಳು ದೇಶದ ಬೆನ್ನೆಲುಬು. ಗ್ರಾಮ ಉದ್ಧಾರವಾಗದೆ ದೇಶ ಉದ್ಧಾರ ಸಾಧ್ಯವಿಲ್ಲ ಅಂತ ಮಹಾತ್ಮಾ ಗಾಂಧೀಜಿ ಹೇಳಿದ್ದರು. ಅದರಂತೆ ಇವತ್ತಿನ ಪಬ್ಲಿಕ್ ಹೀರೋ ಉಡುಪಿಯ ಕಾಪು ತಾಲೂಕಿನ ಬೆಳಪು ಗ್ರಾಮ ಅಭಿವೃದ್ಧಿಯಾಗಿದೆ.

ಉಡುಪಿಯ ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯ್ತಿ ಆಗಿದೆ. ಈ ಗ್ರಾಮ ದೇಶದಲ್ಲೇ ಮಾದರಿ ಗ್ರಾಮ ಪಂಚಾಯತ್. ಗ್ರಾಮದಲ್ಲಿ 2500 ಜನಸಂಖ್ಯೆಯಿದ್ದು ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಗೆ ಮನೆ ನಿವೇಶನ ಹಂಚಿಕೆ ಮಾಡಿದೆ. ಮೂರು ಬಡಾವಣೆಗೆ ಮೂರು ಪಕ್ಷದ ನಾಯಕರ ಹೆಸರಿಡಲಾಗಿದೆ. ಪ್ರತಿ ಮನೆಗೂ ದಿನಕ್ಕೆ 20 ಲೀಟರ್ ಕುಡಿಯುವ ನೀರು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ 70 ಎಕರೆ ಜಮೀನನ್ನು ಸಣ್ಣ ಕೈಗಾರಿಕೆಗೆ ಮೀಸಲಿಡಲಾಗಿದೆ. ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಈಗಾಗಲೇ ಬಜೆಟ್‍ನಲ್ಲಿ ಮೊತ್ತ ಮೀಸಲಿಡಲಾಗಿದೆ.

ಗ್ರಾಮದ ಎಲ್ಲಾ ಮನೆಗಳ ಕಸವನ್ನು ತಂದು ಪಂಚಾಯತ್ ವ್ಯಾಪ್ತಿಯಲ್ಲೇ ತ್ಯಾಜ್ಯ ನಿರ್ವಹಣಾ ಘಟಕ ಮಾಡಲಾಗಿದೆ. ಕಾಂಕ್ರಿಟ್ ರಸ್ತೆ, ವಾಣಿಜ್ಯ ಸಂಕೀರ್ಣ, ಬ್ಯಾಂಕ್, ಸಹಕಾರಿ ಸಂಘ, ಎಟಿಎಂ, ಕೆರೆಗಳ ಅಭಿವೃದ್ಧಿ, ಸ್ಮಶಾನಕ್ಕೆ ವ್ಯವಸ್ಥೆ ಎಲ್ಲ ವ್ಯವಸ್ಥೆಯನ್ನು ಬೆಳಪು ಗ್ರಾಮ ಹೊಂದಿದೆ.

ಕಳೆದ 15 ವರ್ಷಗಳಿಂದ ಈ ಪಂಚಾಯತ್ ಸದಸ್ಯರ ಸ್ಥಾನಕ್ಕೆ ಚುನಾವಣೆಯೇ ನಡೆದಿರಲಿಲ್ಲ. ಈ ಬಾರಿ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವ ಉದ್ದೇಶದಿಂದ ಮತದಾನ ಮಾಡಲಾಯ್ತು. ಆದ್ರೂ ಎಲ್ಲಾ ಪಕ್ಷದವರು ಹೊಂದಿಕೊಂಡು ರಾಜಕೀಯ ಕೊಳಕು ಮಾಡದೆ ಗ್ರಾಮಕ್ಕಾಗಿ ಶ್ರಮಿಸುತ್ತಿದ್ದಾರೆ.

ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಬೆಳಪುವಿನ ಸಾಧನೆ ಗುರುತಿಸಿ ಗೌರವಿಸಿದ್ರು. ಜೊತೆಗೆ ನೈರ್ಮಲ್ಯ ವಿಚಾರವಾಗಿ ರಾಜ್ಯ-ಕೇಂದ್ರ ಸರ್ಕಾರಗಳು ಕೊಡ್ತಿರೋ ಪ್ರಶಸ್ತಿಗಳಿಗೂ ಬೆಳಪು ಭಾಜನವಾಗ್ತಿದೆ. ಆರು ಭಾಷೆಗಳಲ್ಲಿ ಬೆಳಪು ಗ್ರಾಮದ ಬಗ್ಗೆ ಪಠ್ಯ ಬಂದಿದೆ. ಮತ್ತೊಂದು ವಿಶೇಷ ಅಂದ್ರೆ ಯುನೆಸ್ಕೋದಿಂದ 20 ದೇಶದ ಸದಸ್ಯರು ಬೆಳಪು ಗ್ರಾಮ ಪಂಚಾಯತ್ ಅಭಿವೃದ್ಧಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

https://www.youtube.com/watch?v=FW2ga0o3qs0

Comments

Leave a Reply

Your email address will not be published. Required fields are marked *