ಅಂಕೋಲದಲ್ಲೊಂದು ಬೆಳದಿಂಗಳ ಊಟ-ಊರು ಬಿಟ್ಟವರನ್ನು ಸೇರಿಸಿದ ವಿನೂತನ ಕಾರ್ಯಕ್ರಮ

ಕಾರವಾರ: ಇಂದಿನ ಆಧುನಿಕ ವಿದ್ಯಮಾನಕ್ಕೆ ಬದಲಾಗುತ್ತಿರುವ ಜನತೆ ಪ್ರಕೃತಿ ಸೌಂದರ್ಯ ನೋಡುತ್ತಾ, ಅದರ ಜೊತೆ ಕಾಲ ಕಳೆಯುವುದಕ್ಕಿಂತ ಮೊಬೈಲ್, ಕಂಪ್ಯೂಟರ್ ಇದರ ಜೊತೆಯೇ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಆದರೆ ಅಂಕೋಲ ತಾಲೂಕಿನ ಗಡಿ ಭಾಗದ ಹಳವಳ್ಳಿ ಊರಿನ ಯುವಕರೆಲ್ಲಾ ಸೇರಿ ಸನಿಹದ ಏಳುಕೊಡಿ ಪಾರ್ ನಲ್ಲಿ ರವಿವಾರ ‘ಬೆಳದಿಂಗಳ ಊಟ’ ಹಬ್ಬವನ್ನು ಮಾಡಿ ಸಂತಸಪಟ್ಟರು.

7 ಕವಲುಗಳಾಗಿ ಹರಿಯುವ ಗಂಗಾವಳಿ ನದಿಯ ವಿಶಾಲ ಕಲ್ಲುಬಂಡೆಗಳ ಮೇಲೆ ಊರಿನ ಯುವಕರೆಲ್ಲಾ ಮುಸ್ಸಂಜೆ 5 ಗಂಟೆಗೆ ಸೇರಿದರು. ಹಾಡು- ಹರಟೆ, ಮಧುರವಾದ ಹಳೆಯ ನೆನಪುಗಳನ್ನೆಲ್ಲಾ ಮೆಲುಕು ಹಾಕುತ್ತಾ ಪ್ರಕೃತಿಯ ಸೂರ್ಯಾಸ್ತದ ಸುಂದರ ಕ್ಷಣ ಕಳೆದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ‘ಬೆಳದಿಂಗಳ ಊಟ’ ಹಬ್ಬ ಪ್ರಾರಂಭಿಸಿದರು. ಊರಿನ ಹಿರಿಯ ಎಸ್.ಎಂ.ಹೆಗಡೆ ಮಾತನಾಡಿ ಟಿವಿ, ಮೊಬೈಲ್ ಇದರಲ್ಲಿಯೇ ಮುಳುಗದೇ ವರ್ಷಕ್ಕೊಮ್ಮೆಯಾದರೂ ಊರಿನ ನಾವೆಲ್ಲರೂ ಚಾರಣ, ಬೆಳದಿಂಗಳ ಊಟದಂಥ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಗಮನ ಸೆಳೆದ ರಸಪ್ರಶ್ನೆ:
ರಸಪ್ರಶ್ನೆಯೆಂದರೆ ನಾವು ಪ್ರಶ್ನೋತ್ತರದ ರೀತಿ ಯೋಚಿಸುತ್ತೇವೆ. ಆದರೆ ಇಲ್ಲಿ ಊರಿನ ಹಳೆಯವರನ್ನು, ಊರ ಹೊರಗಿನವರನ್ನು ನೆನೆಸಿಕೊಳ್ಳುವಂಥ ವಿಶೇಷ ರೀತಿಯ ರಸಪ್ರಶ್ನೆ ಕಾರ್ಯಕ್ರಮ ಆಕರ್ಷಣೀಯವಾಗಿದ್ದಲ್ಲದೇ, ಊರ ಕಾಳಜಿ ವ್ಯಕ್ತಪಡಿಸಿತು.

ನಂತರದಲ್ಲಿ ಜೋಳದ ರೊಟ್ಟಿ ಊಟವನ್ನು ಸರ್ವರೂ ಸವಿದು ಸಂತಸ ಪಟ್ಟರು. ಈ ಮೂಲಕ ಊರಿನಿಂದ ವೃತ್ತಿ ನಿಮಿತ್ತ ಬೇರೆ ಸ್ಥಳದಲ್ಲಿ ವಾಸವಾಗಿದ್ದವರು ಬೆಳದಿಂಗಳ ಹಬ್ಬದ ಮೂಲಕ ಮತ್ತೊಮ್ಮೆ ಸೇರುವ ಮೂಲಕ ಹೊಸ ತಲೆಮಾರುಗಳ ಪರಿಚಯ ಮಾಡಿಕೊಂಡರು.

Comments

Leave a Reply

Your email address will not be published. Required fields are marked *