ಐಸ್ ಮಾರಿ ಕುಟುಂಬದ ಹೊಣೆ ಹೊತ್ತಿರೂ ಬಾಲಕನ ವಿದ್ಯಾಭ್ಯಾಸಕ್ಕೆ ಬೇಕಿದೆ ಬೆಳಕು

ದಾವಣಗೆರೆ: ಜಿಲ್ಲೆಯ ಈ ಬಾಲಕನಿಗೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಹೋಗಬೇಕು ಎನ್ನುವುದು ಕನಸು. ಆದ್ರೆ ವಿಧಿ ಅಟವೇ ಬೇರೆಯಾಗಿದೆ. ಶಾಲೆಗೆ ಹೋಗಿ ಪಾಠ ಕಲಿಯುವ ವಯಸ್ಸಿನಲ್ಲಿ ಮನೆಯನ್ನು ಸಾಗಿಸುವ ಹೊಣೆ ಈತನ ಮೇಲಿದೆ. ಅಷ್ಟಾದರೂ ಈ ಬಾಲಕನು ಮಾತ್ರ ಛಲ ಬಿಡದೇ ಕೆಲಸ ಮಾಡಿಕೊಂಡೆ ಶಾಲೆಗೆ ಹೋಗುತ್ತಿದ್ದಾನೆ.

ಬಿರು ಬಿಸಿಲಿನಲ್ಲಿ ಐಸ್ ಮಾರುತ್ತಿರುವ ಬಿಸಿ ರಕ್ತದ ಬಾಲಕ. ಮತ್ತೊಂದು ಕಡೆ ಓದುವ ಛಲದಿಂದ ಶಾಲೆಯ ಶುಲ್ಕ ಕಟ್ಟಲು ಕಷ್ಟಪಟ್ಟು ದುಡಿಯುವ ಹಂಬಲ. ಹೌದು. ಇದೆಲ್ಲ ಕಂಡು ಬಂದಿದ್ದು ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆಯ ನಿವಾಸಿ ತಿಪ್ಪೇಶ್ ಎನ್ನುವ ಬಾಲಕನ ಕಣ್ಣಿನಲ್ಲಿ.

ತಿಪ್ಪೇಶ್ ದಾವಣಗೆರೆಯ ಸೋಮೇಶ್ವರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. 9ನೇ ತರಗತಿ ಓದಿ ಹತ್ತನೇ ತರಗತಿಗೆ ಹೋಗಲು ಶಾಲೆ ಶುಲ್ಕ ಕಟ್ಟಿ ಮನೆಯ ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾನೆ. ಎಲ್ಲಾ ವಿಷಯಗಳಲ್ಲಿ ಮುಂದಿರುವ ಯುವಕ ಶಾಲೆಯ ಶುಲ್ಕ ಕಟ್ಟಲು ತುಂಬಾ ಕಷ್ಟ ಪಡುತ್ತಿದ್ದಾನೆ. ಅಲ್ಲದೇ ತಿಪ್ಪೇಶ್ ನ ತಂದೆ ಶ್ರೀನಿವಾಸ್ ತನ್ನ ತಾಯಿಯನ್ನು ಬಿಟ್ಟು ಬೇರೆ ಮದುವೆಯಾಗಿ ಹಲವು ವರ್ಷಗಳೇ ಕಳೆದಿವೆ.

ಮನೆಯನ್ನು ನಡೆಸಲು ತಾಯಿ ಕೋಮಲ ಟೈಲರಿಂಗ್ ಮಾಡಿಕೊಂಡು ಮಗನ ಶಾಲೆಗೆ ಹಾಗೂ ಮನೆಯ ಖರ್ಚಿಗೆ ಅಲ್ವಸ್ವಲ್ಪ ಉಳಿಸುತ್ತಿದ್ದಾರೆ. ಮೊದಲ ಮಗಳು ವರ್ಶಿತ ಹುಟ್ಟಿದಾಗಿನಿಂದಲೇ ಅಂಗವಿಕಲೆ. ಅವಳ ಪೋಷಣೆ ಮಾಡಿಕೊಂಡು ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ಮಗನನ್ನು ಚೆನ್ನಾಗಿ ಓದಿಸಬೇಕು ಎನ್ನುವುದರಿಂದ ಸಾಲ ಮಾಡಿ ಶಾಲೆಯ ಫೀಸ್ ಕಟ್ಟುತ್ತಿದ್ದಾರೆ. ಆ ಸಾಲವನ್ನು ತಾಯಿ ಮಗ ಸೇರಿ ತಿಂಗಳಿಗೆ ಇಷ್ಟು ಎನ್ನುವಂತೆ ತೀರಿಸಿಕೊಂಡು ಬರುತ್ತಿದ್ದಾರೆ. ಎಷ್ಟೇ ಕಷ್ಟವಾದ್ರು ನನ್ನ ಮಗನನ್ನು ಓದಿಸುತ್ತೇನೆ ಎನ್ನುತ್ತಿದ್ದಾರೆ ತಾಯಿ ಕೋಮಲ.

ಬಾಲಕನು ಮಾತ್ರ ಪ್ರತಿನಿತ್ಯ ಬೆಳಿಗ್ಗೆ ಸಮಯದಲ್ಲಿ ತಾಯಿಯ ಜೊತೆ ಹಾಲನ್ನು ಮಾರುತ್ತಾನೆ. ನಂತ್ರ ಬಸ್ ನಿಲ್ದಾಣಗಳಲ್ಲಿ ಐಸ್ ಮಾರಿಕೊಂಡು ಹಣ ಸಂಪಾದನೆ ಮಾಡುತ್ತಿನೆ. ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ಕಷ್ಟ ಪಡುತ್ತಿದ್ದಾನೆ. ತಾಯಿಯ ಅಣ್ಣ (ಸೋದರ ಮಾವ) ಇಷ್ಟು ವರ್ಷ ಓದಿಸಿಕೊಂಡು ಬರುತ್ತಿದ್ದರು. ಆದ್ರೆ ನಾಲ್ಕು ವರ್ಷಗಳಿಂದ ತವರು ಮನೆ ಕಡೆ ತೊಂದರೆಯಾಗಿ ಇವರೇ ಶುಲ್ಕ ಕಟ್ಟುವಂತ ಪರಿಸ್ಥಿತಿ ಬಂದೊದಗಿದೆ. ಆದ್ರೆ ಎಷ್ಟೇ ಕಷ್ಟ ಬಂದ್ರೂ ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು ಎಂದು ಕಷ್ಟ ಪಡುತ್ತಿದ್ದಾನೆ. ಮುಂದಿನ ಶಿಕ್ಷಣಕ್ಕೂ ಸಹ ಸಾಕಷ್ಟು ಹಣ ಬೇಕಾಗಿದೆ ಇದರಿಂದ ದಿಕ್ಕೂ ತೋಚದೆ ನಿಲ್ಲುವಂತ ಪರಿಸ್ಥಿತಿ ಬಂದೊದಗಿದೆ.

ಒಟ್ಟಾರೆಯಾಗಿ ಛಲ ಒಂದು ಇದ್ದರೆ ಸಾಕು ಏನಾದರು ಮಾಡಬಹುದು ಎನ್ನುವುದನ್ನು ಈ ಯುವಕನನ್ನು ನೋಡಿದ್ರೆ ತಿಳಿದು ಬರುತ್ತದೆ. ಮುಂದಿನ ಜೀವನದ ಬಗ್ಗೆ ಕನಸನ್ನು ಕಂಡ ಯುವಕನಿಗೆ ಸಹಾಯ ಬೇಕಾಗಿದೆ. ಸಹಾಯಕ್ಕಾಗಿ ಹಸ್ತಾ ಚಾಚುತ್ತಾ ದಾನಿಗಳ ನಿರೀಕ್ಷೆಯಲ್ಲಿ ಯುವಕ ಕಾಯುತ್ತಾ ಕುಳಿತಿದ್ದಾನೆ.

https://www.youtube.com/watch?v=zb_y7XmVWiw

 

Comments

Leave a Reply

Your email address will not be published. Required fields are marked *