ಕಿತ್ತು ತಿನ್ನುವ ಬಡತನ ಜೊತೆಗೆ ಇಬ್ರು ಹೆಣ್ಮಕ್ಕಳ ಕಟ್ಟಿಕೊಂಡು ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ತಂದೆಗೆ ಬೇಕಿದೆ ನೆರವು

ಮಂಡ್ಯ: ಕಿತ್ತು ತಿನ್ನುವ ಬಡತನ ಜೊತೆಗೆ ಇಬ್ಬರು ಪುಟಾಣಿ ಮಕ್ಕಳನ್ನು ಕಟ್ಟಿಕೊಂಡು ಊರೂರು ಸುತ್ತುತ್ತಾ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಇವರು ಬೆಳಕು ಕಾರ್ಯಕ್ರಮಕ್ಕೆ ಬಂದು ಸಹಾಯವನ್ನು ಕೇಳಿಕೊಳ್ಳುತ್ತಿದ್ದಾರೆ.

ಶಿವಕುಮಾರ್ ಅಸಹಾಯಕರಾಗಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೀದಿ ಬೀದಿ ಅಲೆಯುತ್ತಾ ಬದುಕುತ್ತಿದ್ದಾರೆ. ಇವರು ಬೆಂಗಳೂರಿನ ಸ್ವತಂತ್ರ್ಯಪಾಳ್ಯ ನಿವಾಸಿ ಲಕ್ಷ್ಮಿದೇವಿ ಎಂಬವರೊಡನೆ ಮದುವೆಯಾಗಿತ್ತು. ಅವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಸ್ವಾತಿ ಮತ್ತು ಸಂಗೀತ ಎಂಬ ಇಬ್ಬರು ಹೆಣ್ಣು ಮಕ್ಕಳು. ಈಗ ಸ್ವಾತಿಗೆ ಆರು ವರ್ಷ ಸಂಗೀತಾಗೆ ಐದು ವರ್ಷ. ಶಿವಕುಮಾರ್ ಫಾಸ್ಟ್ ಫುಡ್ ಅಂಗಡಿ ಹಾಕಿಕೊಂಡು ಜೀವನಕ್ಕೆ ಬೇಕಾದ ದುಡಿಮೆ ಮಾಡುತ್ತಿದ್ದರು. ಸಿನಿಮಾ ಆಸಕ್ತಿಯೂ ಇದ್ದುದ್ದರಿಂದ ಸಹ ಕಲಾವಿದನಾಗಿ, ನಿರ್ದೇಶಕರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಶಿವಕುಮಾರ್ ಒಂದು ದಿನ ಬೈಕ್‍ನಿಂದ ಬಿದ್ದು ಕೋಮ ಸ್ಥಿತಿಗೆ ತಲುಪುತ್ತಾರೆ. ಜೊತೆಗೆ ಟಿಬಿ ಖಾಯಿಲೆಯು ಬರುತ್ತದೆ. ಆದರೆ ಪತ್ನಿ ಲಕ್ಷ್ಮಿದೇವಿ ಗಂಡನ ಅನಾರೋಗ್ಯ ನೋಡಿ ಕರುಣೆ ಇಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಹೊರಟು ಹೋಗಿದ್ದಾಳೆ. ಇತ್ತ ಶಿವಕುಮಾರ್ ತಂದೆ ತಾಯಿಯೂ ಕೂಡ ಅವರನ್ನು ದೂರ ಮಾಡಿದ್ದಾರೆ. ಇದರಿಂದ ಕಂಗಾಲಾಗಿರುವ ಶಿವಕುಮಾರ್ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬದುಕು ಕಟ್ಟಿಕೊಳ್ಳಲು ಊರೂರು ಅಲೆಯುತ್ತಿದ್ದಾರೆ ಎಂದು ಬಪ್ಪನಪುರ ಗ್ರಾಮಸ್ಥರು ಕಾಂತರಾಜು ತಿಳಿಸಿದ್ದಾರೆ.

ಸದ್ಯಕ್ಕೆ ನಾನು ಜಿಲ್ಲೆಯ ಮಳವಳ್ಳಿ ತಾಲೂಕಿನ ಬಪ್ಪನಪುರದಲ್ಲಿರುವ ಮಠದಲ್ಲಿ ಆಶ್ರಯ ಪಡೆದಿದ್ದೇನೆ. ಒಂದಷ್ಟು ಗಾರೆ ಕೆಲಸ ಮಾಡಿ ಬರುವ ಹಣದಲ್ಲಿ ಮಕ್ಕಳಿಗೆ ಬಟ್ಟೆ, ಆಹಾರ ಒದಗಿಸುತ್ತಿದ್ದೇನೆ. ನನಗೆ ಪಾಸ್ಟ್ ಫುಡ್ ತಯಾರಿಸಲು ಬರುತ್ತದೆ, ಆದರೆ ನನ್ನ ಬಳಿ ನಯಾ ಪೈಸೆ ಹಣವಿಲ್ಲ. ಯಾರಾದ್ರು ಸಹಾಯ ಮಾಡಿ ಫಾಸ್ಟ್ ಫುಡ್ ಅಂಗಡಿಗೆ ಬೇಕಾದ ವಸ್ತುಗಳನ್ನು ಒದಗಿಸಿದರೆ. ನಾನು ವ್ಯಾಪಾರದಿಂದ ಬರುವ ಹಣದಿಂದ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ. ಜೊತೆಗೆ ನಾನು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಶಿವಕುಮಾರ್ ಸಹಾಯ ಕೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *