ಮನೆಯಲ್ಲಿ ಬಡತನ, 10ನೇ ತರಗತಿವರೆಗೆ ಆಸರೆಯಾದ ಅಜ್ಜಿ- ಮುಂದಿನ ವಿದ್ಯಾಭ್ಯಾಸಕ್ಕೆ ದಾನಿಗಳತ್ತ ಕೈಚಾಚಿದ ದಾವಣೆಗೆರೆ ಯುವತಿ

ದಾವಣಗೆರೆ: ಈಕೆಯ ಮನೆಯಲ್ಲಿ ಬಡತನವಿರಬಹುದು ಆದ್ರೆ ವಿದ್ಯಾಭ್ಯಾಸದಲ್ಲಿ ಮಾತ್ರ ಅಗರ್ಭ ಶ್ರೀಮಂತೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಈಕೆಗೆ ಮುಂದಿನ ಶಿಕ್ಷಣಕ್ಕೆ ಆರ್ಥಿಕ ತೊಂದರೆ ಉಂಟಾಗಿದೆ. ದಾನಿಗಳ ನಿರೀಕ್ಷೆಯಲ್ಲಿ ಈ ಯುವತಿ ದಾರಿ ಕಾಯುತ್ತಿದ್ದಾಳೆ.

ಈಕೆಯ ಹೆಸರು ನಯನ. ದಾವಣಗೆರೆ ತಾಲೂಕಿನ ಹೊಸ ಕುಂದವಾಡ ಗ್ರಾಮದ ಯುವತಿ. ಓದಿನಲ್ಲಿ ಎಲ್ಲರಿಗಿಂತ ಮುಂದೆ ಇರುವ ವಿದ್ಯಾರ್ಥಿನಿ. ಸರ್ಕಾರಿ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡ ಈಕೆ ಚನ್ನಾಗಿ ಓದಿ ಡಾಕ್ಟರ್ ಆಗುವ ಕನಸು ಕಂಡಿದ್ದಾಳೆ. ಆದ್ರೆ ಮನೆಯ ಪರಿಸ್ಥಿತಿ ನೋಡಿದ್ರೆ ತೀರ ಬಡತನದ ಬದುಕನ್ನು ಅನುಭವಿಸುತ್ತಿದ್ದಾಳೆ. ಎಸ್‍ಎಸ್‍ಎಲ್‍ಸಿ ವರೆಗೂ ಅಜ್ಜಿಯ ಮನೆಯಲ್ಲಿ ಇದ್ದು ಸರ್ಕಾರಿ ಶಾಲೆಯಲ್ಲಿ ಓದಿ ಇಡೀ ಗ್ರಾಮವೇ ಕೊಂಡಾಡುವಂತೆ ಮಾಡಿದ್ದಾಳೆ. ಈಕೆಗೆ ಡಾಕ್ಟರ್ ಆಗುವ ಆಸೆ ಇದ್ದು ಆ ಕನಸು ಎಲ್ಲಿ ಗಾಳಿ ಗೋಪುರವಾಗುತ್ತದೆಯೋ ಎನ್ನುವ ಭಯ ಈ ಯುವತಿಗೆ ಕಾಡುತ್ತಿದೆ.

ನಯನ ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕು ಗಿರಿಯಾಪುರ ಗ್ರಾಮದವಳು. ತಂದೆ ಶಿವಪ್ಪ ಹಾಗೂ ತಾಯಿ ಗೀತಾ ಬಡತನದ ಬದುಕನ್ನು ಅನುಭವಿಸುತ್ತಿದ್ದಾರೆ. ಮೂರುಜನ ಹೆಣ್ಣುಮಕ್ಕಳಿದ್ದು, ಒಂದು ಎಕರೆ ಹೊಲದಲ್ಲಿ ಜೀವನ ನಡೆಸುವಂತಾಗಿದೆ. ಮನೆಯನ್ನು ಸಾಗಿಸಲು ಕಷ್ಟವಾದ ಕಾರಣ ದಂಪತಿ ಇಬ್ಬರು ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿದ್ದಾರೆ. ಮೊದಲನೆ ಮಗಳಾದ ನಯನ ಓದಿನಲ್ಲಿ ಆಸಕ್ತಿ ಹೊಂದಿದ್ದು, ಪೋಷಕರ ಕಷ್ಟ ನೋಡಿ ಓದುವುದನ್ನು ಬಿಟ್ಟಿದ್ದಳು. ಆದ್ರೆ ಅವರ ಅಜ್ಜಿ ಮಾತ್ರ ಅವಳ ಆಸರೆಗೆ ನಿಂತು ಹತ್ತನೇ ತರಗತಿಯವರೆಗೂ ಓದಿಸಿದ್ರು. ಈಗ ಮುಂದಿನ ವಿದ್ಯಾಭ್ಯಾಸಕ್ಕೆ ಕಷ್ಟವಾಗುತ್ತದೆ ಎನ್ನುತ್ತಾರೆ ಪೋಷಕರು.

ಒಟ್ಟಾರೆಯಾಗಿ ಛಲ ಒಂದು ಇದ್ದರೆ ಸಾಕು ಏನಾದರೂ ಮಾಡಬಹುದು ಎನ್ನುವುದು ಈ ಯುವತಿಯ ಕಣ್ಣಿನಲ್ಲಿ ಕಾಣುತ್ತಿದೆ. ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕನಸನ್ನು ಕಂಡ ಯುವತಿಗೆ ಸಹಾಯ ಬೇಕಾಗಿದೆ. ಓದಿಗಾಗಿ ದಾನಿಗಳತ್ತ ತನ್ನ ಸಹಾಯಹಸ್ತ ಚಾಚಿದ್ದಾಳೆ.

 

Comments

Leave a Reply

Your email address will not be published. Required fields are marked *