ದಾನಿಗಳ ನೆರವಿನಲ್ಲೇ SSLC ಮುಗಿಸಿರೋ ಕೋಲಾರದ ಕೀರ್ತಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

ಕೋಲಾರ: ತನ್ನ ಪಾಡಿಗೆ ತಾನು ಓದುತ್ತಿರುವ ವಿದ್ಯಾರ್ಥಿನಿ ಒಂದೆಡೆಯಾದ್ರೆ, ಆಕೆಯ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾ ಮೊಮ್ಮಗಳನ್ನ ನೋಡುತ್ತಿರುವ ವಯಸ್ಸಾದ ಜೀವಗಳು ಇನ್ನೊಂದೆಡೆ. ಇದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹರಳಕುಂಟೆ ಗ್ರಾಮದ ಬಡ ವಿದ್ಯಾರ್ಥಿನಿ ಕೀರ್ತಿಯ ದುಸ್ಥಿತಿ.

ಈಕೆಗೆ ತಂದೆಯಿಲ್ಲ, ಮನೆ ಪೋಷಣೆಗೆ ತಾಯಿ ಕೂಲಿ-ನಾಲಿಯೆ ಜೀವನಾಧಾರ. ಇಂತಹ ಸ್ಥಿತಿಯಲ್ಲಿ ಮಗಳನ್ನ ಓದಿಸುವುದು ಹಗಲುಗನಸಾದ್ರೂ ಇಷ್ಟು ದಿನ ಶಿಕ್ಷಕರು ಹಾಗೂ ದಾನಿಗಳ ಸಹಾಯದಿಂದ ಎಸ್‍ಎಸ್‍ಎಲ್‍ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ವಿಶೇಷತೆ ಅಂದ್ರೆ ಗ್ರಾಮೀಣ ಪ್ರತಿಭೆಯಾಗಿರುವ ಈಕೆ ಹತ್ತನೆ ತರಗತಿಯಲ್ಲಿ ಶೇ.91 ಅಂಕ ಗಳಿಸಿದ್ದಾಳೆ. ಆದ್ರೆ ಮುಂದಿನ ವಿದ್ಯಾಭ್ಯಾಸ ಕಷ್ಟಕರವಾಗಿದ್ದು, ಯಾವುದಾರೊಂದು ವಸತಿ ಕಾಲೇಜಿನಲ್ಲಿ ದಾಖಲಾತಿ ಸಿಕ್ಕರೆ ಉತ್ತಮ ವಿದ್ಯಾಭ್ಯಾಸ ಮಾಡಿ ಮನೆಯ ಪೋಷಣೆ ಜೊತೆಗೆ ಸಮಾಜ ಸೇವೆ ಮಾಡುವ ಕನಸು ಹೊಂದಿದ್ದಾಳೆ.

ತಂದೆ ಸಾವನ್ನಪ್ಪಿದ 8 ದಿನಗಳಿಗೆ ಜನಿಸಿರುವ ಕೀರ್ತಿಗೆ ಲಕ್ಷ್ಮೀ ಕೃಪೆ ಇಲ್ಲದಿದ್ದರೂ ಸರಸ್ವತಿ ಒಲಿದಿದ್ದಾಳೆ. ಬಡತನದ ನಡುವೆ ದಾನಿಗಳ ಆಸರೆಯಲ್ಲೆ ಒಳ್ಳೇ ಅಂಕ ಪಡೆದಿರುವ ವಿದ್ಯಾರ್ಥಿನಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಐಎಎಸ್ ಮಾಡುವ ಕನಸು ಹೊಂದಿದ್ದಾಳೆ. ಆದ್ರೆ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ರಕ್ಷಣೆ ಹಾಗೂ ಸುರಕ್ಷತೆ ದೃಷ್ಠಿಯಿಂದ ವಸತಿ ಕಾಲೇಜುಗಳ ಮೊರೆ ಹೋಗುತ್ತಿದ್ದಾಳೆ.

ಒಟ್ಟಿನಲ್ಲಿ ಎಲ್ಲವೂ ಇದ್ರು ಏನೂ ಸಾಧನೆ ಮಾಡದ ಇವತ್ತಿನ ದಿನಗಳಲ್ಲಿ ಉತ್ತಮ ಅಂಕ ಪಡೆದ ಕೀರ್ತಿ ವಿಭಿನ್ನವಾಗಿ ಕಾಣ್ತಾಳೆ. ಬಡತನದ ಹಿನ್ನೆಲೆ ವಿದ್ಯಾಭ್ಯಾಸಕ್ಕೆ ಯಾರಾದ್ರು ನೆರವಾಗಿ ಈಕೆಯ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.

https://www.youtube.com/watch?v=IBNFsqWdu48

Comments

Leave a Reply

Your email address will not be published. Required fields are marked *