ಟೈಫಾಯಿಡ್‍ನಿಂದ ಎರಡೂ ಕಣ್ಣು ಕಳೆದುಕೊಂಡಿರೋ ವ್ಯಕ್ತಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಿದೆ ಬೆಳಕು

ಹಾಸನ: ಮಾನವನ ಜೀವನದಲ್ಲಿ ದೇಹದ ಪ್ರತಿಯೊಂದು ಅಂಗವೂ ಅತಿಮುಖ್ಯ. ದೇಹದ ಯಾವುದೇ ಭಾಗದಲ್ಲಿ ತೊಂದರೆ ಆದ್ರೂ ಕಷ್ಟವೇ. ಕೆಲ ದಿನಗಳವರೆಗೆ ಚೆನ್ನಾಗಿದ್ದ ಕಣ್ಣುಗಳು ಕಳೆದುಕೊಂಡು ಬದುಕುವುದು ಬಹಳ ದುಸ್ತರವಾದ ಸ್ಥಿತಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ರೀತಿಯ ಕಷ್ಟ ಅನುಭವಿಸುತ್ತಿದ್ದಾರೆ ದೊರೆಯಪ್ಪ.

ಹೌದು. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಎಂ.ಹುಣಸೇಕೆರೆ ಗ್ರಾಮದ ದೊರೆಯಪ್ಪ ಹುಟ್ಟು ಕುರುಡರಲ್ಲ. 35 ವರ್ಷದ ದೊರೆಯಪ್ಪಗೆ 7 ನೇ ತರಗತಿ ಓದುವಾಗ ಟೈಫಾಯಿಡ್‍ನಿಂದಾಗಿ ಕಣ್ಣುಗಳು ಮಂಜಾಗಿ ದೃಷ್ಠಿ ದೋಷವಾಗಿದೆ. ಕೆಲ ಸಮಯದವರೆಗೆ ಒಂದು ಕಣ್ಣಿನಿಂದ ಹಾಗೋ ಹೀಗೋ ಜೀವನ ಸಾಗಿಸುತ್ತಾ ಬಂದಿದ್ದಾರೆ. ತನ್ನ ಅಂಧತ್ವದಿಂದಾಗಿ ಓದು ಮುಂದುವರೆಸಲಾಗದೆ 7 ನೇ ತರಗತಿಗೇ ಬಿಟ್ಟು ಮನೆಯಲ್ಲಿ ತಾಯಿಯೊಂದಿಗೆ ಕೈಜೋಡಿಸಿಕೊಂಡು ಜೀವನ ಸಾಗಿಸುತ್ತಾ ಬಂದ್ರು.

ಕಳೆದ 15 ವರ್ಷಗಳ ಹಿಂದೆ ಇನ್ನೊಂದು ಕಣ್ಣೂ ಕೂಡ ಕಾಣದಂತಾಗಿ ಸಂಪೂರ್ಣ ಅಂಧತ್ವ ಆವರಿಸಿದೆ. ಅದಾಗಲೇ ಮದುವೆಯಾಗಿದ್ದ ದೊರೆಯಪ್ಪ ಈಗ ಪತ್ನಿ-ತಾಯಿ ಮತ್ತು ಮಗುವಿಗೋಸ್ಕರ ದುಡಿಯಲೇ ಬೇಕಾದ ಅನಿವಾರ್ಯತೆ ಇದೆ. ಗ್ರಾಮದಲ್ಲಿಯೇ ಒಂದು ಪುಟ್ಟ ಅಂಗಡಿಯನ್ನು ನಡೆಸುತ್ತಾರೆ. ಚಿಲ್ಲರೆ ಅಂಗಡಿಯಲ್ಲಿ ಪ್ರತಿದಿನ ಬರುವ ಅಲ್ಪ ಆದಾಯದಿಂದಲೇ ಜೀವನ ಮುಂದುವರೆಸಿದ್ದಾರೆ.

ಇನ್ನು ಈಗಾಗಲೇ ಪಂಚಾಯಿತಿ ವತಿಯಿಂದ ನೀಡಿರುವ ಈ ಅಂಗಡಿ ಪೆಟ್ಟಿಗೆ ತುಕ್ಕು ಹಿಡಿದಿದೆ. ಅದರಲ್ಲೇ ಪ್ರತಿದಿನದ ತಮ್ಮ ವ್ಯಾಪಾರವನ್ನು ಮುಂದುವರೆಸಿದ್ದಾರೆ. ಪ್ರತಿದಿನ ಬೆಳಗ್ಗೆ ತಿಂಡಿ ತಿನ್ನಿಸಿ, ಪತ್ನಿಯೇ ಅಂಗಡಿಯವರೆಗೂ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ. ಪುನಃ ಸಂಜೆ ಅಂಗಡಿ ಬಾಗಿಲು ಹಾಕಿ ವಾಪಾಸ್ ಕರೆದುಕೊಂಡು ಬರುತ್ತಾರೆ. ಸದ್ಯ ಇಲ್ಲಿಯವರೆಗೆ ಹೇಗೋ ಜೀವನ ಸಾಗಿದೆ. ಆದ್ರೆ ಪ್ರತಿ ದಿನದ ಖರ್ಚು ವೆಚ್ಚ ಹೆಚ್ಚಾಗುತ್ತಿರುವುದರಿಂದ ಈಗ ಆದಾಯ ಸಾಲುತ್ತಿಲ್ಲ. ತನಗಿರುವ ಅಂಗಡಿಗೆ ಬಂಡವಾಳದ ಅಗತ್ಯ ಇದೆ. ಯಾರಾದ್ರೂ ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಯಾವ ರೀತಿಯ ಸಹಾಯವಾದ್ರೂ ಪರವಾಗಿಲ್ಲ. ನನಗೆ ಅದರ ಅವಶ್ಯಕತೆ ಇದೆ. ದುಡಿದು ತಿನ್ನಬೇಕೆಂಬುದು ನನ್ನ ಆಸೆ. ನನ್ನ ಕುಟುಂಬವನ್ನೂ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲೆಯೇ ಇದೆ ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪಂಚಾಯಿತಿ ವತಿಯಿಂದ ಈಗಾಗಲೇ ಅಂಗಡಿ ಮಳಿಗೆಗೆ ಸಹಾಯ ಮಾಡಿದ್ದಾರೆ. ಇನ್ನು ಅವರ ತಾಯಿಗೆ ಒಂದು ಮನೆಯನ್ನೂ ಕೊಡಿಸುತ್ತೇವೆ. ಅವರ ಮನೆಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸುತ್ತೇವೆ. ಮತ್ತು ಮನೆಗೆ ಗ್ಯಾಸ್ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಇವರ ಸಮಸ್ಯೆಗೆ ಯಾರಾದ್ರೂ ಸ್ಪಂದಿಸಲಿ ಎಂಬುದು ನಮ್ಮ ಆಶಯ.

https://www.youtube.com/watch?v=S6O7vHFtfME

Comments

Leave a Reply

Your email address will not be published. Required fields are marked *