ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಖಾನಾಪೂರ ತಾಲೂಕಿನ ಬೇಡರಹಟ್ಟಿ ಗ್ರಾಮದ ಬಸವರಾಜ ಯಲ್ಲಪ್ಪ ನಾಯಕ (40), ಗಂದಿಗವಾಡ ಗ್ರಾಮದ ಶಂಕರ ಚನ್ನಬಸಪ್ಪ ಜಕರಾಯ(25) ಹಾಗೂ ಗೋಕಾಕ ತಾಲೂಕಿನ ಮಲ್ಲಮರಡಿ ಗ್ರಾಮದ ಮಲ್ಲೇಶ ಯಲ್ಲಪ್ಪ ಪೂಜೇರಿ(20) ಬಂಧಿತರು. ಗುರು ಉರ್ಪ್ ಕರಿಯಪ್ಪ ಯಲ್ಲಪ್ಪ ನಾಯಕ(30) ಹತ್ಯೆಗೀಡಾಗಿದ್ದ ವ್ಯಕ್ತಿ.

ಮೃತ ಕರಿಯಪ್ಪನಿಗೂ ಹಿರಿಯ ಸಹೋದರ ಬಸವರಾಜನ ಪತ್ನಿಗೂ ಅಕ್ರಮ ಸಂಬಂಧವಿತ್ತು. ಕಳೆದ 12 ವರ್ಷಗಳ ಹಿಂದೆಯೇ ಮಕ್ಕಳನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದನು. ಬಳಿಕ ಫೆ.13 ರಂದು ತಮ್ಮ ಊರಿನಲ್ಲಿ ಜಾತ್ರೆ ಇರುವುದರಿಂದ ಮರಳಿ ಬಂದಿದ್ದನು. ವೈಮನಸ್ಸು ಹೊಂದಿದ್ದರಿಂದ ಬಸವರಾಜ ತನ್ನ ಸಂಬಂಧಿಕಾರದ ಶಂಕರ ಹಾಗೂ ಮಲ್ಲೇಶ್ ಅವರೊಂದಿಗೆ ಸೇರಿಕೊಂಡು ಕರಿಯಪ್ಪನನ್ನು ಕೊಲೆ ಮಾಡಿದ್ದಾರೆ. ನಂತರ ಈ ಪ್ರಕರಣ ಮುಚ್ಚಿ ಹಾಕುವ ಹಾಗೂ ಸಾಕ್ಷ್ಯ ಉದ್ದೇಶದಿಂದ ಇದ್ದಲಹೊಂಡದ ರೈಲ್ವೆ ನಿಲ್ದಾಣ ಹತ್ತಿರ ಶವವನ್ನು ರೈಲು ಹಳಿಯ ಮೇಲೆ ಎಸೆದು ಹೋಗಿದ್ದರು.
ಫೆ.14 ರಂದು ಬೆಳಗಾವಿ ರೈಲ್ವೆ ಪೊಲೀಸರಿಗೆ ಅನಾಮಧೇಯ ಶವ ಪತ್ತೆಯಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಸಂದರ್ಭದಲ್ಲಿ ಮೃತ ವ್ಯಕ್ತಿ ಗುರು ಉರ್ಪ್ ಕರಿಯಪ್ಪ ಯಲ್ಲಪ್ಪ ನಾಯಕ, ಖಾನಾಪೂರ ತಾಲೂಕಿನ ಬೇಡರಹಟ್ಟಿ ಗ್ರಾಮದವನು ಎಂಬ ಸುಳಿವು ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಮೃತ ವ್ಯಕ್ತಿಯ ಮನೆಯವರನ್ನು ವಿಚಾರಣೆ ನಡೆಸಿದ ಸಮಯದಲ್ಲಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

Leave a Reply