ನಕ್ಸಲರ ಅಟ್ಟಹಾಸಕ್ಕೆ ಬೆಳಗಾವಿ ಯೋಧ ಹುತಾತ್ಮ – ಅಂತ್ಯಸಂಸ್ಕಾರದ ವೇಳೆ ಹರಿದುಬಂತು ಜನಸಾಗರ

ಬೆಳಗಾವಿ: ಎರಡು ದಿನದ ಹಿಂದೆ ನಕ್ಸಲರ ಗುಂಡಿನ ದಾಳಿಗೆ ಬಲಿಯಾಗಿದ್ದ ರಾಹುಲ್ ಶಿಂಧೆ ಅವರ ಅಂತ್ಯ ಸಂಸ್ಕಾರ ಇಂದು ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.

ಜಿಲ್ಲೆಯ ನಾವಗಾ ಗ್ರಾಮದ ರಾಹುಲ್ ಶಿಂಧೆ ಬಿಎಸ್‍ಎಫ್ ಯೋಧನಾಗಿ 2012ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. 117ನೇ ಬೆಟಾಲಿಯನ್‍ನ ಯೋಧನಾಗಿ ಪಶ್ಚಿಮ ಬಂಗಾಳದಲ್ಲಿ ರಾಹುಲ್ ಸೇವೆ ಸಲ್ಲಿಸುತ್ತಿದ್ದರು.

ಇಂದು ಬೆಳಗ್ಗೆ ಹುತಾತ್ಮ ಯೋಧನ ಪಾರ್ಥಿವ ಶರೀರ ಗೋವಾ ಮಾರ್ಗವಾಗಿ ಸ್ವಗ್ರಾಮ ನಾವಗಾಕ್ಕೆ ಸೇನಾ ಸಿಬ್ಬಂದಿ ತಂದಿದ್ದರು. ಈ ವೇಳೆ ಪಾರ್ಥಿವ ಶರೀರ ಆಗಮಿಸುವ ಮಾರ್ಗದ ಉದ್ದಕ್ಕೂ ಗ್ರಾಮದಲ್ಲಿ ರಂಗೋಲಿಯನ್ನ ಬಿಡಿಸಿ ‘ರಾಹುಲ್ ಅಮರ್ ರಹೇ’ ಎಂದು ಘೋಷಣೆ ಕೂಗುತ್ತಾ ಜನರು ನಮನ ಸಲ್ಲಿಸಿದರು.

ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ, ನಂತರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ವೀರಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಹಾಗೂ ಎಸ್.ಪಿ ಸುಧೀರ್ ಕುಮಾರ್ ರೆಡ್ಡಿ ಯೋಧನಿಗೆ ಗೌರವ ಸಮರ್ಪಿಸಿದರು. ಹಾಗೇ ಪೊಲೀಸ್ ಇಲಾಖೆಯಿಂದ ಮೂರು ಸುತ್ತುಗಳ ಗುಂಡು ಹಾರಿಸಿ ವೀರ ಯೋಧನಿಗೆ ಗೌರವ ಸಲ್ಲಿಸಿತು.

ವೀರ ಯೋಧ ರಾಹುಲ್‍ಗೆ ಕಳೆದ ಎರಡು ತಿಂಗಳ ಹಿಂದಷ್ಟೆ ಮದುವೆ ಫಿಕ್ಸ್ ಆಗಿತ್ತು. ಹುತಾತ್ಮರಾಗುವ ಹಿಂದಿನ ದಿನ ತಂದೆ ತಾಯಿಯೊಂದಿಗೆ ಮಾತನಾಡಿದ್ದ ರಾಹುಲ್ ಮೇ ತಿಂಗಳಲ್ಲಿ ಮದುವೆ ಮಾಡಿಕೊಂಡರಾಯಿತು. ಆಗ ರಜೆ ಸಿಗುತ್ತೆ ಎಂದು ಹೇಳಿ ಖುಷಿಯಿಂದ ಮಾತನಾಡಿದ್ದರು. ಆದರೆ ವಿಧಿಯ ಆಟ ಎಂಬಂತೆ ಮಾರನೇ ದಿನವೇ ದೇಶಕ್ಕಾಗಿ ಯೋಧ ಪ್ರಾಣ ಕೊಟ್ಟಿದ್ದಾರೆ.

ಇಂದು ಯೋಧನ ಪಾರ್ಥಿವ ಶರೀರ ಬರುತ್ತಿದ್ದಂತೆ ಮದುವೆಯಾಗದ ಹಿನ್ನಲೆಯಲ್ಲಿ ಎಕ್ಕಿ ಗಿಡಕ್ಕೆ ಮದುವೆ ಮಾಡಿಸಿ, ಸಾರ್ವಜನಿಕ ದರ್ಶನದ ನಂತರ ಯೋಧನ ಜಮೀನಿನಲ್ಲೇ ಅಂತ್ಯಕ್ರಿಯೆ ಸಿದ್ಧತೆ ನಡೆದಿತ್ತು. ಅದೇ ರೀತಿ ಮಧ್ಯಾಹ್ನದ ವೇಳೆ ಸಕಲ ಸರ್ಕಾರಿ ಗೌರವಗಳ ಜೊತೆಗೆ ಮರಾಠಾ ಸಂಪ್ರದಾಯದಂತೆ ತಂದೆಯಿಂದ ಅಗ್ನಿಸ್ಪರ್ಶ ಮಾಡಿಸಿ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಯಿತು.

Comments

Leave a Reply

Your email address will not be published. Required fields are marked *