ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ 70 ಅಡಿ ಕೋಟೆ ಮೇಲಿಂದ ಬಿದ್ದು ಯುವಕ ಸಾವು

ಬೆಳಗಾವಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕನೊಬ್ಬ ಕೋಟೆ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಸವದತ್ತಿ ಪಟ್ಟಣದಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ರಾಮಾಪುರ ಗ್ರಾಮದ ಶಿವಾನಂದ ಪವಾರ(26) ಮೃತ ಯುವಕ. ಸೋಮವಾರ ಸಂಜೆ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಿವಾನಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ನಿಶ್ಚಿತಾರ್ಥ ಜೋಡಿಯಿಂದ ಬಾವಿಯ ಮೆಟ್ಟಿಲಿನಲ್ಲಿ ಪ್ರಿ ವೆಡ್ಡಿಂಗ್ ಸೆಲ್ಫಿ – ಆಯತಪ್ಪಿ ಬಿದ್ದು ಯುವತಿ ಸಾವು

ಶಿವಾನಂದ ಪವಾರ ಸೋಮವಾರ ಸವದತ್ತಿ ಕೋಟೆ ನೋಡಲು ಬಂದಿದ್ದ. ಈ ವೇಳೆ ಕೋಟೆಯ ಮೇಲೆ ಹತ್ತಿ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಸುಮಾರು 70 ಅಡಿ ಎತ್ತರದಿಂದ ಬಿದ್ದ ಪರಿಣಾಮ ಶಿವಾನಂದ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಕೆಲ ಯುವಕರು ಹಾಗೂ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ಅತಿಯಾದ ರಕ್ತಸ್ರಾವದ ಪರಿಣಾಮ ಶಿವಾನಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸವದತ್ತಿ ಠಾಣೆಯ ಪೊಲೀಸರು ಶಿವಾನಂದನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದರು. ಬಳಿಕ ಮೃತ ದೇಹವನ್ನು ಯುವಕನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *