ಲಾರಿ, ಗೂಡ್ಸ್ ಮೂಲಕ ರಾಜ್ಯಕ್ಕೆ ಎಂಟ್ರಿ- ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ

ಬೆಳಗಾವಿ: ಕರುನಾಡಿಗೆ ಇದೀಗ ಮುಂಬೈನಿಂದ ವಾಪಸ್ ಆಗುತ್ತಿರುವವರೇ ಕಂಟಕವಾಗ್ತಿದ್ದಾರೆ. ಸೋಂಕಿತರು ಲಾರಿಗಳ ಮೂಲಕ ಕದ್ದುಮುಚ್ಚಿ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೊರೊನಾ ದಿನದಿಂದ ದಿನಕ್ಕೆ ತನ್ನ ರೌದ್ರತೆಯನ್ನು ಹೆಚ್ಚಿಸುತ್ತಲೇ ಇದೆ. ಲಾಕ್‍ಡೌನ್ ಸಡಿಲಿಕೆ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕದ್ದು ನುಸುಳುತ್ತಿರುವರೂ ಕಾರಣವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಭಾರೀ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಮುಂಬೈನಿಂದ ಅಂಬುಲೆನ್ಸ್ ನಲ್ಲಿ ಬಂದು ಮಂಡ್ಯದಲ್ಲಿ ಸೋಂಕು ಹೆಚ್ಚಾಗ್ತಿದೆ. ಹಾವೇರಿಗೂ ಮುಂಬೈನಿಂದ ಅಣ್ಣ-ತಮ್ಮ ಗೂಡ್ಸ್ ನಲ್ಲಿ ಬರುತ್ತಾ ಕೊರೊನಾ ತಂದಿದ್ದಾರೆ. ಹೀಗಾಗಿ ಧಾರವಾಡಕ್ಕೂ ಢವಢವ ಶುರುವಾಗಿದೆ.

ಕಳೆದ ಒಂದು ವಾರದಿಂದ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಮುಂಬೈ, ಪುಣೆಯಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ರಾಜ್ಯಕ್ಕೆ ಮಹಾರಾಷ್ಟ್ರದ ಜನರು ಎಂಟ್ರಿ ಕೊಡುತ್ತಾರೆ. ಹಾಗಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗ್ರಾಮದ ಬಳಿ ಸದ್ಯ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಅಡಿಷನಲ್ ಎಸ್‍ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಐವತ್ತು ಜನ ಪೊಲೀಸ್ ಸಿಬ್ಬಂದಿ ಮತ್ತು ತಾಲೂಕು ಹೆಲ್ತ್ ಆಫೀಸರ್ ನೇತೃತ್ವದಲ್ಲಿ ಇನ್ನೊಂದು ತಂಡ ಕೆಲಸ ಮಾಡುತ್ತಿದೆ. ಇದರಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ 30 ಮಂದಿ ಸಿಬ್ಬಂದಿ ಶಿಫ್ಟ್ ವೈಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬೆಳಗಾವಿ ಡಿಸಿ ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ರಾಜ್ಯದ ವಾಹನಗಳು ಬರಲಿ ಅಥವಾ ಹೊರ ರಾಜ್ಯದ ವಾಹನಗಳೇ ಬರಲಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಎಂಟ್ರಿ ಮಾಡಿಕೊಳ್ಳುತ್ತಾರೆ. ಮಹಾರಾಷ್ಟ್ರದಲ್ಲಿರುವ ರಾಜ್ಯದ ಕಾರ್ಮಿಕರು ತಮ್ಮೂರಿಗೆ ಬರುತ್ತಿದ್ದು ಅವರಿಗೂ ಸದ್ಯ ರಾಜ್ಯಕ್ಕೆ ಎಂಟ್ರಿ ಕೊಡುತ್ತಿಲ್ಲ. ಇನ್ನೂ ಮೆಡಿಕಲ್ ಎಮರ್ಜೆನ್ಸಿ ಬರುವವರಿಗೆ ದಾಖಲೆ ಪರಿಶೀಲನೆ ಮಾಡಿ ನಂತರ ಅವರ ಕೈಗೆ ಸೀಲ್ ಹಾಕಿ ಕಳುಹಿಸುತ್ತಾರೆ. ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ತಿಳಿದುಕೊಂಡು ಆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನಿಡಲಾಗುತ್ತದೆ. ಇನ್ನೂ ಅಗತ್ಯ ಸಾಮಾಗ್ರಿಗಳನ್ನ ಸಾಗಿಸುವ ಲಾರಿಗಳನ್ನ ನಿಲ್ಲಿಸಿ ಅದ್ರಲ್ಲಿ ಎಷ್ಟು ಜನರಿದ್ದಾರೆ ಎಷ್ಟು ಜನರಿಗೆ ಪಾಸ್ ನೀಡಿದ್ದಾರೆ ಎಂಬುದನ್ನ ಚೆಕ್ ಮಾಡ್ತಾರೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

ಒಟ್ಟಾರೆ ಕೊರೊನಾ ವಿಷಯದಲ್ಲಿ ಸ್ವಲ್ಪ ಯಾಮಾರಿದ್ರೂ ಬಹುದೊಡ್ಡ ಅನಾಹುತ ಸಂಭವಿಸುತ್ತೆ ಎಂಬ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *