ಬೆಳಗಾವಿಯಲ್ಲಿ ಬಾಯ್ಬಿಟ್ಟ ಭೂಮಿ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ

ಬೆಳಗಾವಿ: ಕಳೆದ ಹದಿನೈದು ದಿನಗಳಿಂದ ಅಲ್ಲಿ ದಿನದಿಂದ ದಿನಕ್ಕೆ ಭೂಮಿ ಕುಸಿಯುತ್ತಾ ಹೋಗುತ್ತಿದೆ. ಆತಂಕದಲ್ಲಿ ಅಲ್ಲಿನ ಗ್ರಾಮಸ್ಥರು ದಿನ ಕಳೆಯುತ್ತಿದ್ದರೆ, ಇತ್ತ ಭೂಕುಸಿದಿರುವ ಸ್ಥಳ ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಅಪಾಯ ಅಂತಾ ಗೊತ್ತಿದ್ದರೂ ಯುವಕರು ಆಳಕ್ಕಿಳಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಅವಾಂತರ ಅಲ್ಲಿ ನಡೆಯುತ್ತಿದ್ದರೂ ಯಾರಿಗೆ ಎನಾದ್ರೇನೂ ಅದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ತಾಲೂಕು ಆಡಳಿತಾಧಿಕಾರಿಗಳು ಕುಳಿತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುಳ್ಳೂರಿನಲ್ಲಿ ಕಳೆದ 15 ಹದಿನೈದು ದಿನಗಳಿಂದ ಜಮೀನು ಮತ್ತು ರಸ್ತೆಗಳಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡ ಬಿದ್ದಿದೆ. ಈ ಕಂದಕಗಳನ್ನು ನೋಡೋಕೆ ಅಂತಾನೇ ಡೈಲಿ ಸಾವಿರಾರು ಜನ ಬರುತ್ತಿದ್ದಾರೆ. ಊರೋರು ಸಾಲಲ್ಲ ಎಂದು ಕಾರು, ಟಾಟಾ ಏಸ್, ಟ್ರ್ಯಾಕ್ಟರ್ ಮಾಡಿಕೊಂಡು ಬಂದು ಕಂದಕ ನೋಡಿ ಗಾಬರಿಯಿಂದ ವಾಪಸ್ ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರಾದ ರವಿ ಹೇಳಿದ್ದಾರೆ. ಇದನ್ನೂ ಓದಿ: ಕುಸಿದ ಜಾಗದಲ್ಲೇ ಭೂಮಿ ತಾಯಿಗೆ ವಿಶೇಷ ಪೂಜೆ

ಯುವಕರನ್ನಂತೂ ಕೇಳೋದೇ ಬೇಡ, ಗ್ರಾಮದ ದೊಡ್ಡವರೆಲ್ಲಾ ಹಿಂಗಾದ್ರೆ ಹೆಂಗೆ ಎಂದು ಗಾಬರಿ ಪಡುತ್ತಿದ್ದರೆ, ಯುವಕರು ಆ ಕಂದಕಕ್ಕೇ ಇಳಿದು ಸೆಲ್ಫಿ ತೆಗೆದುಕೊಳ್ಳುದ್ದಾರೆ. ಒಂದು ಸಾರಿ ನೆಪಮಾತ್ರಕ್ಕೆ ಭೇಟಿ ಕೊಟ್ಟು ಹೋದ ಅಧಿಕಾರಿಗಳು ಮತ್ತೆ ಇತ್ತ ತಿರುಗಿಯೇ ನೋಡುತ್ತಿಲ್ಲ. ಅಲ್ಲದೆ ಕುಸಿದ ರಸ್ತೆಯನ್ನು ಸರಿಪಡಿಸಿ ಸಂಚಾರಕ್ಕೂ ಅನುವು ಮಾಡಿಕೊಡುತ್ತಿಲ್ಲ. ಹೀಗಾಗಿ ಊರಿನ ಜನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮಹಾಂತೇಶ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *