ಕೊಚ್ಚಿ ಹೋಯ್ತು ತಾಯಿಯ ಕನಸು- ಗರ್ಭದಲ್ಲಿಯೇ ಕಣ್ಮುಚ್ಚಿದ ಕಂದಮ್ಮ!

ಬೆಳಗಾವಿ: ವರುಣನ ಅಬ್ಬರ ಹಾಗೂ ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ನದಿಗೆ ಸಿಕ್ಕಿರುವ ಜನರ ಕನಸುಗಳು ಕೊಚ್ಚಿಕೊಂಡು ಹೋಗುತ್ತಿವೆ. ಅಂತೆಯೇ ಬೆಳಗಾವಿ ಜಿಲ್ಲೆಯ 7 ತಿಂಗಳ ಗರ್ಭಿಣಿಯೊಬ್ಬರ ಮಗುವಿನ ಕನಸು ಕೋಯ್ನಾ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ.

ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದ ರೇಣುಕಾ ಅವರು ಇನ್ನೇನು ಎರಡು ತಿಂಗಳಿಗೆ ಮಗುವಿಗೆ ಜನ್ಮ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆರಂಭವಾದ ಹೊಟ್ಟೆನೋವಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಗರ್ಭದಲ್ಲಿಯೇ ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ತಾಯಿ ರೇಣುಕಾ ಅವರ ಆಕ್ರಂದನ ಮುಗಿಲುಮುಟ್ಟಿದೆ.

ಮಳೆ ಹಾಗೂ ಪ್ರವಾಹದಿಂದ ಉಗದಟ್ಟಿ ಗ್ರಾಮವು ನಡುಗಡ್ಡೆಯಂತೆ ಆಗಿದ್ದು, ಮನೆಗಳಿಗೆ ನೀರು ನುಗ್ಗಿ ಜನ ಜೀವನ, ಸಂಚಾರ ಅಸ್ತವ್ಯಸ್ತವಾಗಿದೆ. ರೇಣುಕಾ ಅವರಿಗೆ ಗುರುವಾರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮುಳುಗಡೆಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸೇನಾ ತುಕಡಿಯ ಮೂಲಕ ವೈದ್ಯರನ್ನು ಕರೆತರಲಾಗಿತ್ತು. ಆದರೆ ಅವಧಿಪೂರ್ವ ಹೆರಿಗೆಯಾಗಿದ್ದರಿಂದ ತೂಕವಿಲ್ಲದ ಕಂದಮ್ಮ ತಾಯಿಯ ಮಡಿಲಲ್ಲೇ ಅಸುನೀಗಿತ್ತು.

ಮಗುವನ್ನು ಕಳಕೊಂಡ ತಾಯಿಯನ್ನು ಗುರುವಾರ ಆಸ್ಪತ್ರೆಗೆ ಶಿಫ್ಟ್ ಮಾಡಬೇಕಾಗಿತ್ತು. ಆದರೆ ನವಮಾಸ ಹೊತ್ತ ಕಂದಮ್ಮ ಇನ್ನಿಲ್ಲ, ನಾನು ಎಲ್ಲಿಗೂ ಬರುವುದಿಲ್ಲ ಅಂತ ರೇಣುಕಾ ಹಠ ಹಿಡಿದಿದ್ದರು. ಕೊನೆಗೂ ಸೇನೆಯ ಸಿಬ್ಬಂದಿ ಹಾಗೂ ವೈದ್ಯರು ರೇಣುಕಾ ಅವರನ್ನು ಒತ್ತಾಯದಿಂದ ಇಂದು ರಕ್ಷಣೆ ಮಾಡಿ, ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *