ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ – ಜಾರಕಿಹೊಳಿ ಬ್ರದರ್ಸ್‌ ಸೋಲಿಸಲು ಪಕ್ಷಾತೀತವಾಗಿ ಒಂದಾದ ಲಿಂಗಾಯತ ನಾಯಕರು

ಬೆಳಗಾವಿ: ಪ್ರತಿಷ್ಠಿತ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC Bank) ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ (Jarkiholi Brothers) ವಿರುದ್ಧದ ಹೋರಾಟಕ್ಕೆ ಲಿಂಗಾಯತ (Lingayat) ನಾಯಕರು ಸಜ್ಜಾಗಿದ್ದಾರೆ.

ಹೌದು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಲಿಂಗಾಯತ ನಾಯಕರು ನಿರ್ಧರಿಸಿದ್ದಾರೆ. ಮಹಾರಾಷ್ಟ್ರದ (Maharashtra) ಪ್ರಮುಖ ಮಠವೊಂದರಲ್ಲಿ ಲಿಂಗಾಯತ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ. ಪಕ್ಷಾತೀತವಾಗಿ ಈ ಸಭೆಗೆ ಹಾಜರಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಹಿಡಿತ ಸಾಧಿಸಲು ಒಗ್ಗಟ್ಟಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಈ ಸಭೆಯಲ್ಲಿ ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜೊಲ್ಲೆ ದಂಪತಿ, ರಮೇಶ್ ಕತ್ತಿ, ಅಶೋಕ ಪಟ್ಟಣ್, ನಿಖಿಲ್ ಕತ್ತಿ, ಮಹಾದೇವಪ್ಪ ಯಾದವಾಡ, ರಾಜು ಕಾಗೆ, ಚನ್ನರಾಜ್ ಹಟ್ಟಿಹೊಳಿ ಸೇರಿ ಬಹುತೇಕ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಭೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಆಗದಂತೆ ನಾಯಕರು ಎಚ್ಚರಿಕೆ ವಹಿಸಿದ್ದಾರೆ.

 

ಲಿಂಗಾಯತ ನಾಯಕರು ರಹಸ್ಯ ಸಭೆ ನಡೆಸಿದ ಬೆನ್ನಲ್ಲೇ ಡಿಸಿಸಿ ಬ್ಯಾಂಕ್ ಚುನಾವಣೆ ಅಖಾಡಕ್ಕೆ ಜಾರಕಿಹೊಳಿ ಬ್ರದರ್ಸ್ ಎಂಟ್ರಿಯಾಗಿದ್ದಾರೆ. ತಮ್ಮ ಬೆಂಬಲಿತರ ಪರ ಬಾಲಚಂದ್ರ ಜಾರಕಿಹೊಳಿ, ಸತೀಶ್‌ ಜಾರಕಿಹೊಳಿ ಪ್ರಚಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಪ್ಪಳ | ಮಾಜಿ ಶಾಸಕ ದಡೇಸೂಗುರು ಕಾರಿಗೆ ಕಲ್ಲೆಸೆದ ಕಿಡಿಗೇಡಿಗಳು

ಲಿಂಗಾಯತ ನಾಯಕರ ಸಭೆ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹುಕ್ಕೇರಿ ತಾಲೂಕಿನಲ್ಲಿರುವ ಪ್ರತಿಷ್ಠಿತ ನಿಡಸೋಸಿ ಲಿಂಗಾಯತ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಲಿಂಗಾಯತ ಕಾರ್ಡ್ ಪ್ಲೇ ಮಾಡುವ ಮೂಲಕ ಸಚಿವ ಜಾರಕಿಹೊಳಿ ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ.