ಬೆಳಗಾವಿ ರಾಜಕೀಯ ಬದಲಿಸ್ತೀನಿ- ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅನರ್ಹರ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ.

ಶನಿವಾರ ರಾತ್ರಿ ಅಥಣಿ ಕ್ಷೇತ್ರದ ಕಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹೇಶ ಕುಮಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳ. 2013 ಮತ್ತು 2018ರ ಚುನಾವಣೆಗೆ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ. ಒಳ್ಳೆಯವರು, ಸುಸಂಸ್ಕೃತರು ಇದ್ದಾರೆ ಅಂದುಕೊಂಡಿದ್ದೆವು. ಆದರೆ ಅವರು ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪಕ್ಷವೆನ್ನುವ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ. ಇವತ್ತು ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ ಇನ್ನು ಇವರು ವಿಷ ಕುಡಿದವರು ಇವರು ಬದುಕುತ್ತಾರಾ? ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅನುದಾನ ಕೊಡದಿದ್ದಕ್ಕೆ ಇವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಅಂತಾರೆ. ಅನುದಾನ ಕೇಳೋಕೆ ಆಗದೇ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಮಂತ್ರಿಗಳ ಕಾಲು, ಕೈ ಹಿಡಿದು ಕೇಳಿ ಅನುದಾನ ಪಡೆಯಬಹುದಿತ್ತು ಎಂದು ವಾಗ್ದಾಳಿ ನಡೆಸಿದರು.

ಹೆಣ್ಣು ಮಗಳಾಗಿ 12 ನೂರು ಕೋಟಿ ಅನುದಾನ ತಂದಿದ್ದೇನೆ ಅಂದ್ರೆ ನೀವು ಗಂಡಸರಾಗಿ ತರೋಕೆ ಆಗಲಿಲ್ವಾ? ಇನ್ನೊಬ್ಬರು ಊಟ ಮಾಡಿದ್ದಾರೆ ಅಂತ ನಾವು ಉಪವಾಸ ಇರೋದು ತಪ್ಪು. ಇನ್ನೊಬ್ಬರ ದುಡಿದು ಊಟ ಮಾಡಿದಾರೆ ಅಂದ್ರೆ ನಾವು ದುಡಿದು ಊಟ ಮಾಡಬೇಕೆನ್ನುವುದು ಗಂಡಸ್ಥನ. ಅದನ್ನು ಬಿಟ್ಟು ಮಳ್ಳನಂಗ ಸೋಗು ಹಾಕುವುದು ಕೈ ಮುಗಿಯೋದು ಮಾಡುತ್ತಾರೆ. ಆದರೆ ಇವರದ್ದು ಅತೀ ವಿನಯಂ ಚೋರ್ ಲಕ್ಷಣಂ. ನನ್ನ ಮಾತು ಬಿರುಸು, ಗುಂಡು ಹೊಡೆದಂಗೆ ಇರಬಹುದು. ಆದರೆ ಯಾವತ್ತಿಗೂ ಸತ್ಯಕ್ಕೆ ತಲೆಬಾಗುವೆ. ನಾನು ಅಥಣಿ ಜನರಿಗೆ ಏನೂ ಮಾಡಲು ಆಗದಿದ್ದರೂ ಬೆಳಗಾವಿ ರಾಜಕಾರಣ ಬದಲು ಮಾಡಿ ತೋರಿಸ್ತೀನಿ ಎಂದು ಸವಾಲು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *