ಯೋಧರನ್ನ ಆರಾಧಿಸೋ ಗುಣ ನಮ್ಮದಾಗಬೇಕು: ಪ್ರಮೋದ್ ಮುತಾಲಿಕ್

ಚಿಕ್ಕೋಡಿ(ಬೆಳಗಾವಿ): ದೇಶವಾಸಿಗಳು ನೆಮ್ಮದಿಯಿಂದ ಬದುಕಲು ಜೀವದ ಹಂಗು ತೊರೆದು ಗಡಿ ಕಾಯುವ ಯೋಧರನ್ನು ನಿತ್ಯ ಸ್ಮರಿಸುವುದರ ಜೊತೆಗೆ ಅವರನ್ನು ಆರಾಧಿಸುವ ಗುಣ ನಮ್ಮದಾಗಿರಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ಶ್ರೀರಾಮ ಸೇನಾ ಬೆಣಿವಾಡ ಘಟಕದವರು ಆಯೋಜಿಸಿದ್ದ ”ಯೋಧರಿಗೊಂದು ನಮನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ಷದ ಹಿಂದೆ ಪುಲ್ವಾಮಾ ಉಗ್ರವಾದಿಗಳ ದಾಳಿಗೆ 40 ಯೋಧರು ಹುತಾತ್ಮರಾದರು. ಆದರೆ ಅವರ ತ್ಯಾಗ ಬಲಿದಾನ ಸ್ಮರಿಸುವಲ್ಲಿ ನಮ್ಮ ನೇತಾರರು ರಾಜಕೀಯ ಮಾಡಿದ್ದು ವಿಷಾದಕರ ಎಂದರು.

ಗದಗ ಶಿವಾನಂದ ಬೃಹನ್ಮಠ ನಿಯೋಜಿತ ಜಗದ್ಗುರು ಕೈವಲ್ಯಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಮೊದಲು ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ 60 ಮಂದಿ ಯೋಧರನ್ನು ಸತ್ಕರಿಸಿದರು.

ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ರಮೇಶ್ ಕತ್ತಿ, ಎಸ್.ಡಿ.ವ್ಹಿಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ವಿನಯಗೌಡ ಪಾಟೀಲ್, ವಿಜಯ ರವದಿ, ತಾ.ಪಂ ಸದಸ್ಯ ಬಸವರಾಜ ನಾಯಿಕ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *