ನೆರೆಹಾನಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಲು ಸಿಎಂ ಸೂಚನೆ

ಬೆಳಗಾವಿ: ನೆರೆಹಾನಿ ಸಂದರ್ಭದಲ್ಲಿ ಉಂಟಾಗಿರುವ ಮನೆ ಹಾಗೂ ಬೆಳೆಹಾನಿಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರವಾಗಿ ಸಮೀಕ್ಷೆ ಪೂರ್ಣಗೊಳಿಸಬೇಕು. ಸಮೀಕ್ಷೆ ಪೂರ್ಣಗೊಂಡರೆ ನಿಖರ ಅಂಕಿ-ಅಂಶಗಳ ಸಮೇತ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುತ್ತದೆ. ಆದ್ದರಿಂದ ಆದಷ್ಟು ಬೇಗನೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ನಿರ್ವಹಣೆ ಹಾಗೂ ನೆರೆಹಾನಿಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಇಂದು ನಡೆದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮೀಕ್ಷೆ ವಿಳಂಬಗೊಂಡಷ್ಟು ಸಮಸ್ಯೆ ಜಟಿಲಗೊಳ್ಳುತ್ತದೆ. ಆದ್ದರಿಂದ ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳಿಸಿ ಸಂತ್ರಸ್ತರ ಖಾತೆಗೆ ಪರಿಹಾರ ಜಮೆ ಮಾಡಲು ಕ್ರಮಕೈಗೊಳ್ಳಬೇಕು. ಕಳೆದ ಬಾರಿ ಪ್ರವಾಹ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪ್ರಸಕ್ತ ಸಾಲಿನ ಪ್ರವಾಹ ಹಾನಿ ಸಮೀಕ್ಷೆ ಮಾಡುವಾಗ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಬಾಕಿ ಉಳಿದಿರುವ ಪರಿಹಾರ ಕಂತುಗಳನ್ನು ಬಿಡುಗಡೆ ಮಾಡಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಲಿದೆ. ಮನೆಹಾನಿ ಲಾಗಿನ್ ಅವಧಿ ವಿಸ್ತರಣೆ, ಮನೆಗಳ ಸೂಕ್ತ ದಾಖಲಾತಿ ಇಲ್ಲದ ಕುಟುಂಬಗಳಿಗೆ ಪರಿಹಾರ ಒದಗಿಸಲು ಇರುವ ಪರ್ಯಾಯ ಮಾರ್ಗಗಳ ಕುರಿತು ಪರಿಶೀಲನೆ ನಡೆಸಿ ಕ್ರಮಕೈಹೊಳ್ಳಲಾಗುವುದು. ಈ ರೀತಿಯ ಕುಟುಂಬಗಳ ಪ್ರತ್ಯೇಕವಾದ ಪಟ್ಟಿ ಸಿದ್ಧವಾದ ಬಳಿಕ ಹಣಕಾಸು ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಸಭೆ ನಡೆಸಿ ಸೂಕ್ತ ನಿರ್ಧಾರ ಮಾಡಲಾಗುವುದು ಎಂದರು.

ಗ್ರಾಮಸ್ಥರು ಶಾಶ್ವತ ಸ್ಥಳಾಂತರ ಬಯಸಿದ ಸಂದರ್ಭದಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದರೆ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಲಾಗುವುದು. ಇದಲ್ಲದೇ ನವಗ್ರಾಮ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಕೂಡ ಮನೆಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಇನ್ನು ಹತ್ತು ದಿನಗಳ ಕಾಲ ರಾಜಕೀಯದಿಂದ ಸಿದ್ದರಾಮಯ್ಯ ದೂರ

ಬೆಳಗಾವಿ ಜಿಲ್ಲೆಗೆ ಹೆಚ್ಚುವರಿ ಲಸಿಕೆ ಪೂರೈಕೆ: ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ಸಂಪೂರ್ಣ ಗುಣಮುಖರಾಗುವವರೆಗೆ ಅವರ ಮನೆಗಳಿಗೆ ಕೂಡ ಅಗತ್ಯ ಔಷಧಿ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಪ್ರತಿದಿನ 40 ಸಾವಿರ ಲಸಿಕೆ ನೀಡುವ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿದಿನ ನೀಡಲಾಗುತ್ತಿರುವ 25 ಸಾವಿರ ಲಸಿಕೆಗಳ ಜತೆಗೆ ಹೆಚ್ಚುವರಿಯಾಗಿ ಪ್ರತಿದಿನ 25 ಸಾವಿರ ಲಸಿಕೆಗಳನ್ನು ಪೂರೈಕೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಇದೇ ವೇಳೆ ಹೆಚ್ಚುವರಿ ಅಗತ್ಯವಿರುವ ಲಸಿಕೆಗಳ ಪ್ರಮಾಣದ ಬಗ್ಗೆ ಕೂಡಲೇ ಪ್ರಸ್ತಾಪವನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಓಣಂ ಸಂಭ್ರಮ- ಉಯ್ಯಾಲೆ ಆಡಿದ ಶಶಿ ತರೂರ್

Comments

Leave a Reply

Your email address will not be published. Required fields are marked *