ಮೀನು ಹಿಡಿಯಲು ಹೋದ ಬಾಲಕ ನೀರುಪಾಲು

ಬೆಳಗಾವಿ (ಚಿಕ್ಕೋಡಿ): ಮೀನು ಹಿಡಿಯಲು ಹೋಗಿ ಬಾಲಕನೊಬ್ಬ ನೀರುಪಾಲಾದ ಘಟನೆ ಚಿಕ್ಕೋಡಿ ತಾಲೂಕಿನ ಚಾಂದಶಿರದವಾಡ ಗ್ರಾಮದ ಬಳಿ ನಡೆದಿದೆ.

ಚಾಂದಶಿರದವಾಡ ಗ್ರಾಮದ ಸಂಸ್ಕಾರ್ ಪವಾರ (14) ಮೃತ ದುರ್ದೈವಿ. ದೂಧಗಂಗಾ ನದಿಯಲ್ಲಿ ಶನಿವಾರ ಬಾಲಕ ಮೃತಪಟ್ಟಿದ್ದಾನೆ. ದೂಧಗಂಗಾ ನದಿ ಪಾತ್ರದಲ್ಲಿ ಭಾರೀ ಮಳೆಯಾಗಿದ್ದರಿಂದ ಪ್ರವಾಹ ಹೆಚ್ಚಾಗಿದೆ. ಹೀಗಾಗಿ ಬಾಲಕ ಸಂಸ್ಕಾರ್ ಮೀನು ಹಿಡಿಯಲು ನದಿಗೆ ಹೋಗಿದ್ದ. ಈ ವೇಳೆ ಆಯತಪ್ಪಿ ನದಿಗೆ ಬಿದ್ದು, ನೀರು ಪಾಲಾಗಿದ್ದಾನೆ.

ಸಂಸ್ಕಾರ್ ನದಿಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದರು. ಆದರೆ ಬಾಲಕ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಬಾಲಕನ ಶವಕ್ಕಾಗಿ ಶೋಧ ಆರಂಭಿಸಿದರು.

ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಾಲಕ ಸಂಸ್ಕಾರ್ ಮೃತದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *