ಭವಿಷ್ಯದಲ್ಲಿ ಸೋಂಕಿನ ಸಂಭಾವ್ಯ ಅಲೆಗಳನ್ನು ಎದುರಿಸಲು ಸಿದ್ಧರಾಗಬೇಕು: ಗೌರವ್ ಗುಪ್ತ

ಬೆಂಗಳೂರು: ಕೊರೊನಾ ಮೂರನೇ ಅಲೆಯನ್ನು ಎಲ್ಲರ ಸಹಾಯದಿಂದ ಯಶಸ್ವಿಯಾಗಿ ನಿಭಾಯಿಸಲಾಗಿದ್ದು, ನಮ್ಮ ಮುಂದಿನ ಗುರಿ ಭವಿಷ್ಯದಲ್ಲಿ ಸಂಭಾವ್ಯ ಅಲೆಗಳನ್ನು ಎದುರಿಸುವ ಬಗೆಗಿರಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಪಾಲಿಕೆಯ ಕೋವಿಡ್-19 ತಜ್ಞರ ಸಮಿತಿಯೊಂದಿಗೆ ಇಂದು ನಡೆದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಕ್ರಿಯಾಶೀಲ ಸಂಚಾರಿ ಟ್ರಯಾಜ್ ಘಟಕ ಮತ್ತು ಟೆಲಿ ಟ್ರಯಾಜ್ ಘಟಕ ನಿರ್ಮಿಸಲಾಗಿದೆ. ವೈದ್ಯರು ಮತ್ತು ಸಿಬ್ಬಂದಿ ತಂಡದ ನೆರವಿನಿಂದ ದಿನಕ್ಕೆ 3,000ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ಅವರವರ ಮನೆಯಲ್ಲಿ ಟ್ರಯಾಜ್ ಮಾಡಲಾಗುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ತಗ್ಗುತ್ತಿದ್ದು, ಎಲ್ಲರ ಶ್ರಮದಿಂದ ಕೊರೊನಾ ಮೂರನೇ ಅಲೆಯನ್ನು ನಿಭಾಯಿಸಲಾಗುತ್ತಿದೆ. ಮುಂದೇನಾದರೂ ಹೊಸ ಅಲೆಗಳು ಬಂದಲ್ಲಿ, ಎದುರಿಸುವ ಬಗ್ಗೆ ನಾವು ಸಿದ್ಧರಾಗಿರಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ

ನಗರದಲ್ಲಿ ಮೂರನೇ ಅಲೆಯ ಬಗ್ಗೆ ಜನರಲ್ಲಿನ ಭಯ ಹೋಗಲಾಡಿಸಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಯಿತು. ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಗಮನಹರಿಸಲಾಯಿತು. ಲಸಿಕಾಕರಣವನ್ನೂ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣವು ನಿರ್ದೇಶಿತ ಗುರಿ ತಲುಪಲಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಕಡಿಮೆಯಿದೆ ಎಂದರು.

ಜನವರಿ ತಿಂಗಳಲ್ಲಿ ಶೇ. 1.8 ಸಕ್ರಿಯ ಪ್ರಕರಣಗಳಿದ್ದವು. ಅದರಲ್ಲಿ ಹೆಚ್ಚಿನವರು 60 ವರ್ಷ ಮೇಲ್ಪಟ್ಟವರು. ನಗರದಲ್ಲಿ ಕೊರೊನಾ ಸೋಂಕು ದೃಢಪಟ್ಟು ಐಸಿಯುನಲ್ಲಿ ದಾಖಲಾಗುವ ಎಲ್ಲ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. ಈ ಸಂಬಂಧ ಗಂಭೀರ ಪ್ರಕರಣಗಳ ಪೈಕಿ ಆಸ್ಪತ್ರೆಗೆ ದಾಖಲಾಗಿರುವವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‍ಗೆ ಕಳುಹಿಸಲಾಗುತ್ತದೆ. ಪ್ರಸ್ತುತ ಅಂತಹ ಎಲ್ಲ ಮಾದರಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್‍ರನ್ನು ನಾವು ಬೆಂಬಲಿಸುತ್ತೇವೆ: ಮಮತಾ ಬ್ಯಾನರ್ಜಿ

ಸಭೆಯಲ್ಲಿ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್, ಕೋವಿಡ್ ತಜ್ಞರ ಸಮಿತಿ ಸದಸ್ಯರು ಹಾಗೂ ಇನ್ನಿತರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *