ತನ್ನ ಪರ ತೀರ್ಪು ಕೊಡದ ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ ವಕೀಲ

ಕೊಲ್ಕತ್ತಾ: ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಜನರು ತತ್ತರಿಸಿ ಹೋಗಿದ್ದು, ಭಯಭೀತರಾಗಿದ್ದಾರೆ. ಈ ಮಧ್ಯೆ ತನ್ನ ಕಕ್ಷಿದಾರರ ಪರ ತೀರ್ಪು ಕೊಡಲಿಲ್ಲ ಎಂದು ಸಿಟ್ಟಿಗೆದ್ದ ವಕೀಲರೊಬ್ಬರು ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ್ದಾರೆ.

ಕೊಲ್ಕತ್ತಾದಲ್ಲಿ ಈ ಘಟನೆ ನಡೆದಿದೆ. ದೇಶದೆಲ್ಲೆಡೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೊಲ್ಕತ್ತಾ ಹೈಕೋರ್ಟ್ ಮಾರ್ಚ್ 15ರಿಂದ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುತ್ತೆ, ಬೇರೆ ಪ್ರಕರಣಗಳನ್ನು ಕಾಯ್ದಿಸಲಾಗುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾರ್ಚ್ 25ರಿಂದ ತುರ್ತು ಪ್ರಕರಣಗಳಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸೋದಾಗಿ ನ್ಯಾಯಾಲಯ ಘೋಷಿಸಿತ್ತು.

ಆದರೆ ವಕೀಲ ಬಿಜೋಯ್ ಅಧಿಕಾರಿ ತಮ್ಮ ಕಕ್ಷಿದಾರರ ಪ್ರಕರಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ, ತೀರ್ಪು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಬಸ್ ಲೋನ್ ಕಟ್ಟದ ಪರಿಣಾಮ ಬ್ಯಾಂಕ್ ಅವರು ಕಕ್ಷಿದಾರರ ಬಸ್ ಜಪ್ತಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಎಂದು ಬಿಜೋಯ್ ನ್ಯಾಯಾಧೀಶರಾದ ದೀಪಂಕರ್ ದತ್ತ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದರು.

ಈ ವೇಳೆ ನ್ಯಾಯಾಧೀಶರು ತಮ್ಮ ಕಕ್ಷಿದಾರನ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸದೆ, ತಮ್ಮ ಪರವಾಗಿ ತೀರ್ಪು ನೀಡದ್ದಕ್ಕೆ ಬಿಜೋಯ್ ಕೋಪಗೊಂಡರು. ಅಲ್ಲದೇ ನ್ಯಾಯಮೂರ್ತಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿಮಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ನಲ್ಲಿ ತಮಗೆ ಅಗೌರವ ತೋರಿಸಿ, ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಬಿಜೋಯ್ ಅವರು ನ್ಯಾಯಾಲಯದ ತೀರ್ಪನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ವಕೀಲ ವೃತ್ತಿಯ ಘನತೆಯನ್ನು ಕಾಪಾಡದೆ, ಈ ರೀತಿ ನಡೆದುಕೊಂಡಿದ್ದಕ್ಕೆ ಅವರು ಸ್ಪಷ್ಟನೆ ನೀಡಬೇಕೆಂದು ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

Comments

Leave a Reply

Your email address will not be published. Required fields are marked *