ಡ್ರೆಸ್ಸಿಂಗ್‌ ರೂಮ್‌ ಮಾಹಿತಿ ಲೀಕ್‌ – ಗಂಭೀರ್‌ ಆಪ್ತ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಕಿತ್ತೆಸೆದ ಬಿಸಿಸಿಐ

ಮುಂಬೈ: ಕಳೆದ ವರ್ಷ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರರ್ದಶನ ನೀಡಿದ ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ. ಸರಣಿಯ ಸಂದರ್ಭದಲ್ಲಿ ಡ್ರೆಸ್ಸಿಂಗ್‌ ರೂಮ್‌ (Dressing Room) ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಸಹಾಯಕ ಕೋಚ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಕಿತ್ತೆಸೆದಿದೆ.

ಬ್ಯಾಟಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಮತ್ತು ಮಸಾಜರ್ ಸಿಬ್ಬಂದಿಯನ್ನ ಬಿಸಿಸಿಐ ತೆಗೆದುಹಾಕಿದೆ. ಇದರಲ್ಲಿ ಟೀಂ ಇಂಡಿಯಾದ ಮುಖ್ಯಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರ ಆಪ್ತ ಅಭಿಷೇಕ್‌ ನಾಯರ್‌ (Abhishek Nayar) ಅವರನ್ನೂ ವಜಾಗೊಳಿಸಿರುವುದು ಗಮನಾರ್ಹ. ಗಂಭೀರ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ ಫ್ರಾಂಚೈಸಿಯಲ್ಲಿದ್ದಾಗಲೇ ನಾಯ್‌ ಆಪ್ತರಾಗಿದ್ದರು. ಗಂಭೀರ್‌ ಟೀಂ ಇಂಡಿಯಾ ಕೋಚ್‌ ಆದ ಬಳಿಕ ಸಹಾಯಕ, ಬ್ಯಾಟಿಂಗ್‌ ಕೋಚ್‌ ಆಗಿ ಅವರನ್ನ ನೇಮಕ ಮಾಡಿಕೊಳ್ಳಲಾಯಿತು. ಸದ್ಯ ಮುಂಬರುವ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯೊಳಗೆ ಈ ಹುದ್ದೆಗೆ ಬೇರೆಯವರನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್‌ ರಾಹುಲ್‌, ಮಾವ ಸುನೀಲ್‌ ಶೆಟ್ಟಿ

ಇದರ ಹೊರತಾಗಿ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಂ ದೇಸಾಯಿ ಅವರನ್ನು ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ ಹುದ್ದೆಗಳಿಂದ ಕಿತ್ತೆಸೆಯಲಾಗಿದೆ. ಅದೇ ಸಮಯದಲ್ಲಿ, ಒಬ್ಬ ಮಸಾಜ್ (ಫಿಸಿಯೋ ಸಪೋರ್ಟ್ ಸ್ಟಾಫ್) ಅನ್ನು ಸಹ ತೆಗೆದುಹಾಕಲಾಗಿದೆ. ಆದ್ರೆ ಮಸಾಜರ್‌ ಹೆಸರು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಕರಿನೆರಳು | ಹೈದರಾಬಾದ್‌ ಉದ್ಯಮಿ ಸಂರ್ಪಕಿಸಿದ್ರೆ ಕೂಡ್ಲೇ ತಿಳಿಸಿ – ಆಟಗಾರರಿಗೆ ವಾರ್ನಿಂಗ್‌

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಸಂದರ್ಭದಲ್ಲಿ ಭಾರತ ತಂಡದ ಡ್ರೆಸ್ಸಿಂಗ್‌ ರೂಮ್‌ ಮಾಹಿತಿಯನ್ನ ಸೋರಿಕೆ ಮಾಡಲಾಗುತ್ತಿತ್ತು. ಟೀಂ ಇಂಡಿಯಾದಲ್ಲಿ ಹಂಗಾಮಿ ನಾಯಕನಾಗಲು ಬಯಸುವ ನಿರ್ದಿಷ್ಟ ಆಟಗಾರನಿದ್ದಾನೆ ಎಂಬ ಸುದ್ದಿಯೂ ಹರಿದಾಡಿತ್ತು. ಜೊತೆಗೆ ಗೌತಮ್ ಗಂಭೀರ್ ಸರ್ಫರಾಜ್‌ ಖಾನ್‌ ಅವರನ್ನ ದೂಷಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗಾಗಿ 8 ತಿಂಗಳ ಅವಧಿಯ ಹೊರತಾಗಿಯೂ ಸಹಾಯಕ ಕೋಚ್ ಅಭಿಷೇಕ್ ನಾಯರ್‌ ಅವರನ್ನ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ಆದ್ರೆ ಈ ಬೆಳವಣಿಗೆಗೆ ಸಂಬಂಧಿಸಿದಂತೆ ಬಿಸಿಸಿಐ ಯಾವುದೇ ರೀತಿಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಮುಂದಿನ ಜೂನ್‌ ತಿಂಗಳಿಂದ ಇಂಗ್ಲೆಂಡ್‌ ವಿರುದ್ಧ ಭಾರತ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಇದಕ್ಕೂ ಮುನ್ನವೇ ಭಾರತ ತಂಡಕ್ಕೆ ಹೊಸ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಸಿಬ್ಬಂದಿಯನ್ನು ನೇಮಕ ಮಾಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಕೇವಲ 26 ರನ್‌ ಗಳಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ