ವಿಂಗ್ ಕಮಾಂಡರ್ ಅಭಿನಂದನ್‍ಗೆ ಬಿಸಿಸಿಐ ವಿಶೇಷ ಗೌರವ

ಮುಂಬೈ: ಮೂರು ದಿನಗಳ ಕಾಲ ವೈರಿ ಪಾಕ್ ನೆಲದಲ್ಲಿದ್ದು ಭಾರತಕ್ಕೆ ಹಿಂದಿರುಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಬಿಸಿಸಿಐ ವಿಶೇಷ ಗೌರವ ನೀಡಿದ್ದು, ನಂ.1 ಸ್ಥಾನ ನೀಡಿ ವಿಶೇಷ ಜರ್ಸಿ ಬಿಡುಗಡೆ ಮಾಡಿದೆ.

ವೈರಿ ರಾಷ್ಟ್ರದಿಂದ ಬರುವ ವೇಳೆ ಮುಖದಲ್ಲಿ ಅದೇ ಮಂದಹಾಸ, ಅದೇ ಹುರಿ ಮೀಸೆ, ಅದೇ ಮಾನಸಿಕ ದೃಢತೆಯೊಂದಿಗೆ ಕಾಣಸಿಕ್ಕ ಅಭಿನಂದನ್ ಅವರು ತಾಯ್ನಾಡಿನ ಕಡೆಗೆ ನಗು ಮುಖದಿಂದ ಹೆಜ್ಜೆ ಇಟ್ಟ ಕ್ಷಣ ಎಲ್ಲರನ್ನು ರೋಮಾಂಚನಗೊಳಿಸಿತ್ತು.

ಅಭಿನಂದನ್ ಭಾರತಕ್ಕೆ ಹಿಂದಿರುಗುತ್ತಿದಂತೆ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ದೇಶದ ಜನರು ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇತ್ತ ಬಿಸಿಸಿಐ ಕೂಡ ಅಭಿನಂದನ್ ಅವರಿಗೆ ವಿಶೇಷ ಗೌರವ ನೀಡಿ ತಾಯ್ನಾಡಿಗೆ ಸ್ವಾಗತ ಕೋರಿತ್ತು. ಆಕಾಶವನ್ನು ಆಳುತ್ತಿದ್ದ ನೀವು ನಮ್ಮ ಹೃದಯವನ್ನು ಆಳುವಿರಿ. ನಿಮ್ಮ ಧೈರ್ಯ, ಘನತೆ ದೇಶದ ತಲೆಮಾರುಗಳನ್ನು ಉತ್ತೇಜಿಸುತ್ತದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಟೀಂ ಇಂಡಿಯಾ ಮಾಜಿ ಆಟಗಾರರಾದ ಸಚಿನ್, ಸೆಹ್ವಾಗ್, ಗಂಭೀರ್ ಸೇರಿದಂತೆ ಸುರೇಶ್ ರೈನಾ, ಆರ್ ಅಶ್ವಿನ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಹಾಗೂ ಸೈನಾ ನೆಹ್ವಾಲ್, ಹಿಮಾ ದಾಸ್ ಸೇರಿದಂತೆ ಹಲವು ಕ್ರೀಡಾಪಟುಗಳು ಅಭಿನಂದನ್ ಅವರಿಗೆ ಸ್ವಾಗತ ಕೋರಿ ಟ್ವೀಟ್ ಮಾಡಿದ್ದಾರೆ.

ಅಂದಹಾಗೇ ನೈಕ್ ಕ್ರೀಡಾ ಉತ್ಪನ್ನಗಳ ಕಂಪನಿ ಟೀಂ ಇಂಡಿಯಾ ಹೊಸ ಜೆರ್ಸಿಯನ್ನು ವಿನ್ಯಾಸ ಮಾಡಿದ್ದು, ವಿಶೇಷವಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿ ಜೆರ್ಸಿಗಳನ್ನು ತಯಾರಿಸಲಾಗಿದೆ ಎಂದು ತಿಳಿಸಿದೆ. ಆಟಗಾರರಿಗೆ ಸ್ಫೂರ್ತಿಯಾಗುವ ಹಾಗೂ ಧರಿಸಿದ ವೇಳೆ ಉತ್ತಮ ಎನಿಸುವಂತಹ ರೀತಿಯಲ್ಲಿ ಸಂಸ್ಥೆ ಜರ್ಸಿಗಳನ್ನು ರೂಪಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *