ಜೂನ್-ಸೆಪ್ಟೆಂಬರ್‌ನಲ್ಲಿ ಐಪಿಎಲ್- ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ಇಲ್ಲಿದೆ ನೋಡಿ

– ಭಾರತದಲ್ಲಿ ಸಾಧ್ಯವಾಗದಿದ್ದರೆ ವಿದೇಶದಲ್ಲಿ ಐಪಿಎಲ್
– ಈ ವರ್ಷ ಟೂರ್ನಿ ನಡೆಸಲು ಪಣ ತೊಟ್ಟ ಬಿಸಿಸಿಐ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯನ್ನು ಜೂನ್-ಸೆಪ್ಟೆಂಬರ್ ನಡುವೆ ನಡೆಸಲು ಬಿಸಿಸಿಐ ಚಿಂತನೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಸಿಸಿಐ ಏಪ್ರಿಲ್ 15ರವರೆಗೆ ಟೂರ್ನಿಯನ್ನು ರದ್ದುಗೊಳಿಸಿದೆ. ಆದರೆ ಐಪಿಎಲ್ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳು ತುಂಬಾ ವಿರಳ ಎಂಬ ವಾತಾವರಣ ಸೃಷ್ಟಿಯಾಗಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯ ಪ್ರಕಾರ ಜೂನ್-ಸೆಪ್ಟೆಂಬರ್‌ನಲ್ಲಿ ಟೂರ್ನಿ ನಡೆಸಲು ಐಪಿಎಲ್ ಮುಂದಾಗಿದೆ ಎನ್ನಲಾಗುತ್ತಿದೆ.

ಈ ವರ್ಷ ಐಪಿಎಲ್ ನಡೆಸಲೇಬೇಕೆಂದು ಬಿಸಿಸಿಐ ಪಣ ತೊಟ್ಟಂತೆ ಕಾಣುತ್ತಿದ್ದು ಕಳೆದ ವಾರ ಎರಡು ಪ್ಲ್ಯಾನ್ ರೂಪಿಸಿತ್ತು. ಪ್ಲ್ಯಾನ್ ಎ ಪ್ರಕಾರ ಶನಿವಾರ ಎರಡು ಪಂದ್ಯ ನಡೆಸುವುದು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ಮಿನಿ ಐಪಿಎಲ್ ನಡೆಸಲು ಮುಂದಾಗಿತ್ತು.

ಆದರೆ ಈಗ ಏಪ್ರಿಲ್ ನಲ್ಲೂ ಐಪಿಎಲ್ ನಡೆಸುವುದು ಅನುಮಾನವಾಗಿದೆ. ಮುಂಬರುವ ದಿನಗಳಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಸುಧಾರಿಸದಿದ್ದರೆ ಜುಲೈ-ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ಐಪಿಎಲ್‍ಗೆ ಆತಿಥ್ಯ ವಹಿಸಲು ಯೋಜಿಸುತ್ತಿದೆ ಎಂಬುದಾಗಿ ವರದಿಯಾಗಿದೆ.

ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಐರ್ಲೆಂಡ್ ಕಪ್ ಟಿ20 ನಡೆಯಲಿದೆ. ಜುಲೈ ಮತ್ತು ಸೆಪ್ಟೆಂಬರ್ ತಿಂಗಳುಗಳ ನಡುವೆ 2020ರ ಫ್ಯೂಚರ್ ಟೂರ್ಸ್ ಪ್ರೋಗ್ರಾಂ (ಎಫ್‍ಟಿಪಿ)ಗಳು ಐಪಿಎಲ್ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

ದೇಶದಲ್ಲಿ ಐಪಿಎಲ್‍ಗೆ ಆತಿಥ್ಯ ವಹಿಸಲು ಸಾಧ್ಯವಾಗದಿದ್ದರೆ ಬೇರೆ ವಿದೇಶಗಳಲ್ಲಿ ಆಡಿಸಲು ಬಿಸಿಸಿಐ ನಿರ್ಧರಿಸಿದೆ. ಸದ್ಯಕ್ಕೆ ಎಲ್ಲಾ ಆಟಗಾರರು ಲಭ್ಯವಿಲ್ಲದಿದ್ದರೂ ಸಹ ಜೂನ್-ಸೆಪ್ಟೆಂಬರ್ ನಲ್ಲಿ ಬರುತ್ತಾರೆ. ಆಗ ಐಪಿಎಲ್ ಟೂರ್ನಿಯನ್ನು ಆಯೋಜಿಸಬಹುದು ಎನ್ನುವುದು ಬಿಸಿಸಿಐ ಲೆಕ್ಕಾಚಾರ.

ಈ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಟೂರ್ನಿ ನಡೆದರೆ ಉಳಿದ ದೇಶದ ಆಟಗಾರರಿಗೆ ಯಾವುದೇ ಟೂರ್ನಿಗಳು ಇರುವುದಿಲ್ಲ. ಹೀಗಾಗಿ ಉಳಿದ ಆಟಗಾರರಿಗೆ ಸಮಸ್ಯೆ ಆಗಲಾರದು ಎಂಬ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ ಎನ್ನಲಾಗುತ್ತಿದೆ. ಒಂದು ವೇಳೆ ಭಾರತದಲ್ಲಿ ಆಡಿಸಲು ಸಾಧ್ಯವಾಗದೇ ಇದ್ದಲ್ಲಿ ವಿದೇಶದಲ್ಲಿ ಟೂರ್ನಿ ನಡೆಸಲು ಚಿಂತನೆ ನಡೆಸಲಾಗಿದೆ.

ಟೀಂ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಮತ್ತು ಜೂನ್-ಜುಲೈ ನಡುವೆ ಶ್ರೀಲಂಕಾದಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಿಗದಿಯಾಗಿವೆ. ವಿಶ್ವದ ಕ್ರಿಕೆಟ್ ನಲ್ಲಿ ಹಣಕಾಸು ವಿಚಾರದಲ್ಲಿ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರವನ್ನು ಪಾಕ್ ಹೊರತು ಪಡಿಸಿ ಉಳಿದ ಏಷ್ಯಾದ ರಾಷ್ಟ್ರಗಳು ವಿರೋಧಿಸುವುದು ಕಡಿಮೆ. ಹೀಗಾಗಿ ಈ ವೇಳಾಪಟ್ಟಿಯನ್ನು ಕೊಂಚ ಬದಲಾಯಿಸಲು ಬಿಸಿಸಿಐ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ದ.ಆಫ್ರಿಕಾದಲ್ಲಿ ನಡೆದಿದ್ದ ಐಪಿಎಲ್:
2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭದ್ರತೆ ನೀಡಲು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಿಸಲಾಗಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮೊದಲಾರ್ಧದ ಪಂದ್ಯಗಳನ್ನು ಯುಎಇಯಲ್ಲಿ ಆಡಿಸಲಾಗಿತ್ತು. ಇದರಿಂದಾಗಿ ಯುಎಇಯಲ್ಲಿ ಕ್ರಿಕೆಟ್ ಈಗ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ.

Comments

Leave a Reply

Your email address will not be published. Required fields are marked *