ಐತಿಹಾಸಿಕ ಸಾಧನೆ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ನ್ಯೂಸ್‌ – ವಾರ್ಷಿಕ ಸಂಬಳ ಹೊರತುಪಡಿಸಿ ವಿಶೇಷ ವೇತನ ಘೋಷಣೆ

– ಭಾರತದಲ್ಲಿ ಟೆಸ್ಟ್‌ ಕ್ರಿಕೆಟ್‌ ಪ್ರೋತ್ಸಾಹಕ್ಕೆ ಪ್ರತಿವರ್ಷ 40 ಕೋಟಿ ರೂ. ಹೆಚ್ಚುವರಿ ಹೂಡಿಕೆ

ಧರ್ಮಶಾಲಾ: ಇಂಗ್ಲೆಂಡ್‌ ತಂಡದ ವಿರುದ್ಧ ಟೀಂ ಇಂಡಿಯಾ (Team India) ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆಯೇ ಬಿಸಿಸಿಐ ಆಟಗಾರರಿಗೆ ಸಿಹಿ ಸುದ್ದಿ ನೀಡಿದೆ. ಟೆಸ್ಟ್‌ ಕ್ರಿಕೆಟ್‌ಗೆ ಆದ್ಯತೆ ನೀಡುವ ಕ್ರಿಕೆಟಿಗರ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುವಂತೆ ʻಟೆಸ್ಟ್ ಕ್ರಿಕೆಟ್ ಪ್ರೋತ್ಸಾಹ ಯೋಜನೆʼಯನ್ನು (Test Cricket Incentive Scheme) ಘೋಷಿಸಿದೆ.

ಈ ಯೋಜನೆಯಿಂದಾಗಿ ಟೆಸ್ಟ್‌ ಪಂದ್ಯಗಳಿಗೆ ನಿಗದಿಯಾಗಿರುವ ಶುಲ್ಕ ಹೊರತುಪಡಿಸಿ, ಹೆಚ್ಚುವರಿ ನಗದು ಬಹುಮಾನವನ್ನು ಆಟಗಾರರು ಪಡೆದುಕೊಳ್ಳಲಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ತಿಳಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಇನ್ನಿಂಗ್ಸ್‌, 64 ರನ್‌ಗಳ ಜಯ – ತಾರಾ ಆಟಗಾರರ ಗೈರಿನ ಮಧ್ಯೆಯೂ ಅತ್ಯುತ್ತಮ ಸಾಧನೆ

ಈ ಬಗ್ಗೆ ಸೋಶಿಯಲ್‌ ಮೀಡಿಯಾ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah), ನಮ್ಮ ಗೌರವಾನ್ವಿತ ಕ್ರೀಡಾಪಟುಗಳ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುವಂತೆ ಬಿಸಿಸಿಐ ಟೆಸ್ಟ್‌ ಕ್ರಿಕೆಟ್‌ ಪ್ರೋತ್ಸಾಹ ಯೋಜನೆಯನ್ನು ಘೋಷಣೆ ಮಾಡಿದೆ. ಇದು ಟೆಸ್ಟ್‌ ಕ್ರಿಕೆಟ್‌ ಆಟಗಾರರನ್ನು ಉತ್ತೇಜಿಸುವ ಯೋಜನೆಯ ಭಾಗವಾಗಿದೆ. ಈ ಯೋಜನೆಯ ಅಡಿಯಲ್ಲಿ ಟೆಸ್ಟ್‌ ಪಂದ್ಯಗಳಿಗೆ ವಾರ್ಷಿಕವಾಗಿ ನಿಗದಿಪಡಿಸಿರುವ ವೇತನ ಹೊರತುಪಡಿಸಿ, ಹೆಚ್ಚುವರಿ ಬಹುಮಾನವನ್ನು ಆಟಗಾರರು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಿರಿಕ್‌ ಚೀನಾಗೆ ಠಕ್ಕರ್‌ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ’

9 ಪಂದ್ಯಗಳ ಆವೃತ್ತಿಯಲ್ಲಿ 4ಕ್ಕಿಂತ ಕಡಿಮೆ ಪಂದ್ಯಗಳನ್ನಾಡಿದ್ದರೆ, ಬಹುಮಾನ ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ. ಕನಿಷ್ಠ 5 ರಿಂದ 6 ಟೆಸ್ಟ್‌ಗಳನ್ನು ಆಡುವ ಆಟಗಾರರು ಪ್ಲೇಯಿಂಗ್‌-11 ನಲ್ಲಿ ಇದ್ದರೆ, ಪ್ರತಿ ಪಂದ್ಯಕ್ಕೆ 30 ಲಕ್ಷ ರೂ. ಪಡೆದುಕೊಳ್ಳಲಿದ್ದಾರೆ, ಪ್ಲೇಯಿಂಗ್‌-11ನಲ್ಲಿ ಇಲ್ಲದಿದ್ದರೆ, 15 ಲಕ್ಷ ರೂ. ಹಣ ಪಡೆಯಲಿದ್ದಾರೆ. ಹಾಗೆಯೇ 7 ಅಥವಾ ಅದಕ್ಕಿಂತಲೂ ಹೆಚ್ಚಿನ ಪಂದ್ಯಗಳನ್ನಾಡುವ ಆಟಗಾರರು ಪ್ಲೇಯಿಂಗ್‌-11ನಲ್ಲಿ ಇದ್ದರೆ, 45 ಲಕ್ಷ ರೂ., ಪ್ಲೇಯಿಂಗ್‌-11ನಲ್ಲಿ ಇಲ್ಲದೇ ಇದ್ದರೆ 22.5 ಲಕ್ಷ ರೂ.ಗಳನ್ನ ಪಡೆದುಕೊಳ್ಳಲಿದ್ದಾರೆ. ವರ್ಷದ ಎಲ್ಲ ಟೆಸ್ಟ್‌ ಸರಣಿಗಳಲ್ಲಿ ಪಾಲ್ಗೊಳ್ಳುವ ಆಟಗಾರರಿಗಷ್ಟೇ ಇದು ಅನ್ವಯವಾಗಲಿದೆ ಎಂದು ಜಯ್‌ ಶಾ ತಿಳಿಸಿದ್ದಾರೆ. ಅಲ್ಲದೇ ಭಾರತದಲ್ಲಿ ನಡೆಯುವ ಟೆಸ್ಟ್‌ ಕ್ರಿಕೆಟ್‌ ಅನ್ನು ಇನ್ನಷ್ಟು ಜನಪ್ರಿಯಗೊಳಿಸಲು ಪ್ರತಿ ವರ್ಷ 40 ಕೋಟಿ ರೂ.ಗಳಷ್ಟು ಹೆಚ್ಚುವರಿ ಹಣ ಹೂಡಿಕೆ ಮಾಡಲಿದೆ ಎಂದೂ ಅವರು ತಿಳಿಸಿದ್ದಾರೆ.

ಅಂತಿಮ ಟೆಸ್ಟ್‌ನ ಸಂಕ್ಷಿಪ್ತ ಸ್ಕೋರ್‌:
ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 218/10
ಭಾರತ ಮೊದಲ ಇನ್ನಿಂಗ್ಸ್‌ 477/10
ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 195/10