Paris Olympic 2024: ಭಾರತೀಯ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಬಿಸಿಸಿಐ

ಮುಂಬೈ: ಕ್ರೀಡೆಗಳ ಮಹಾಸಂಗಮ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympic 2024) ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಬಿಸಿಸಿಐ (BCCI) ಬರೋಬ್ಬರಿ 8.5 ಕೋಟಿ ನೆರವು ಘೋಷಿಸಿದೆ.

ಹೌದು. ವಿಶ್ವದ ಅತಿ ದೊಡ್ಡ ಕ್ರೀಡೆಗಳ ಮಹಾಸಂಗಮ ಪ್ಯಾರಿಸ್ ಒಲಿಂಪಿಕ್ಸ್​ಗೆ ಭಾರತ ಸಜ್ಜಾಗಿದೆ. ಇದೇ ಜುಲೈ 26 ರಿಂದ ಪ್ರಾರಂಭವಾಗುವ ಕ್ರೀಡಾ ಹಬ್ಬಕ್ಕೆ ದೇಶದ 117 ಕ್ರೀಡಾಪಟುಗಳ ತಂಡ ಸಿದ್ಧಗೊಂಡಿದೆ. ಕ್ರೀಡಾ ಗ್ರಾಮದಲ್ಲಿ ವಿವಿಧ ದೇಶಗಳ ಎದುರಾಳಿಗಳ ವಿರುದ್ಧ ಕಾದಾಟ ನಡೆಸಲು ಸಿಂಹದ ಮರಿಗಳ ಸೈನ್ಯ ಸಜ್ಜಾಗಿದೆ. ಟೊಕಿಯೊ ಒಲಿಂಪಿಕ್ಸ್​ನಲ್ಲಿ ದಾಖಲೆಯ ಪದಕ ಗೆದ್ದು ಅಭಿಯಾನ ಮುಗಿಸಿದ್ದ ಭಾರತ ಈ ಬಾರಿ ಎರಡಂಕಿ ದಾಟಬೇಕೆಂದು ಪಣತೊಟ್ಟಿದೆ. ಏಷ್ಯನ್​​ ಗೇಮ್ಸ್​ನಲ್ಲಿ 100+ ಪದಕ ಗೆದ್ದಿದ್ದ ಭಾರತ, ಒಲಿಂಪಿಕ್ಸ್​​ನಲ್ಲೂ 10+ ಪದಕ ಗೆಲ್ಲುವ ಉತ್ಸಾಹದೊಂದಿಗೆ ಕ್ರೀಡಾ ಅಂಗಳಕ್ಕೆ ಧುಮುಕುತ್ತಿದೆ.

ಈ ಹೊತ್ತಿನಲ್ಲೇ ವಿಶ್ವದ ಶ್ರೀಮಂತ ಕ್ರೀಡಾಮಂಡಳಿ ಎಂದೇ ಹೆಸರು ಪಡೆದುಕೊಂಡಿರುವ ಬಿಸಿಸಿಐ, ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ಗೆ 8.5 ಕೋಟಿ ರೂ. ನೀಡಲು ಮುಂದಾಗಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Women’s Asia Cup: ರಿಚಾ ಸ್ಫೋಟಕ ಅರ್ಧಶಕ – ಭಾರತಕ್ಕೆ 78 ರನ್‌ಗಳ ಭರ್ಜರಿ ಜಯ; ಸೆಮಿಸ್‌ಗೆ ಇನ್ನೊಂದೇ ಹೆಜ್ಜೆ!

2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಪ್ರತಿನಿಧಿಸುತ್ತಿರುವ ನಮ್ಮ ಅಸಾಧಾರಣ ಕ್ರೀಡಾಪಟುಗಳನ್ನು ಬಿಸಿಸಿಐ ಬೆಂಬಲಿಸುತ್ತದೆ ಅಂತ ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಇದರೊಂದಿಗೆ ಭಾರತದ ಕ್ರೀಡಾ ಅಭಿಯಾನಕ್ಕಾಗಿ ಭಾರತ ಒಲಿಂಪಿಕ್ಸ್‌ ಸಂಸ್ಥೆಗೆ (Indian Olympic Association) 8.5 ಕೋಟಿ ರೂ. ನೆರವು ಘೋಷಿಸಿದೆ ಎಂದು ಬರೆದುಕೊಂಡಿದ್ದಾರೆ. 2024ರ ಟಿ20 ವಿಶ್ವಕಪ್‌ ವಿಜೇತ ತಂಡಕ್ಕೆ 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿದ್ದ ಬಿಸಿಸಿಐ ಇದೀಗ ಒಲಿಂಪಿಕ್ಸ್‌ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಣೆ ಮಾಡುವ ಮೂಲಕ ಮಾದರಿಯಾಗಿದೆ.

ಟೊಕಿಯೊ ಒಲಿಂಪಿಕ್ಸ್​ಗೆ ಹೋಲಿಸಿದರೆ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆ ಕಡಿಮೆ. ಕ್ರೀಡಾ ಸಚಿವಾಲಯ ಪೂರ್ಣ ಪಟ್ಟಿ ಬಿಡುಗಡೆ ಮಾಡಿದ್ದು, ಜುಲೈ 26ರಿಂದ ಶುರುವಾಗುವ ಕ್ರೀಡಾಕೂಟದಲ್ಲಿ 117 ಅಥ್ಲೀಟ್ಸ್ ಭಾರತ ಪ್ರತಿನಿಧಿಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ತಿಳಿಸಿದ್ದಾರೆ. ಕ್ರೀಡಾಪಟುಗಳ ಜೊತೆಗೆ 140 ಸಹಾಯಕ ಸಿಬ್ಬಂದಿ (ಒಟ್ಟು 257) ಕ್ರೀಡಾಗ್ರಾಮ ತಲುಪಲಿದ್ದಾರೆ. ಟೊಕಿಯೊ ಒಲಿಂಪಿಕ್ಸ್​ಗೆ 121 ಕ್ರೀಡಾಪಟುಗಳು ಸೇರಿ 228 ಮಂದಿ ಪ್ರಯಾಣಿಸಿದ್ದರು. ಇದನ್ನೂ ಓದಿ: IPL 2025: ಮರಳಿ ಆರ್‌ಸಿಬಿಗೆ ರಾಹುಲ್‌? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್‌ ಪಂತ್‌?

117 ಕ್ರೀಡಾಪಟುಗಳ ಪೈಕಿ 47 ಮಹಿಳೆಯರು ಮತ್ತು 70 ಪುರುಷರ ಕ್ರೀಡಾಪಟುಗಳು ಕ್ರೀಡಾಕೂಡದ ಭಾಗವಾಗಿದ್ದಾರೆ. ಅಥ್ಲೆಟಿಕ್ಸ್​​ನಲ್ಲಿ 29 ಕ್ರೀಡಾಪಟುಗಳೊಂದಿಗೆ ಅತಿ ದೊಡ್ಡ ಪ್ರಾತಿನಿಧ್ಯ ಹೊಂದಿದೆ. ಇದೇ ಮೊದಲ ಬಾರಿಗೆ ಸಹಾಯಕ ಸಿಬ್ಬಂದಿಯೂ ಒಲಿಂಪಿಕ್ಸ್​ಗೆ ತೆರಳುತ್ತಿದ್ದು, 67 ಕೋಚ್​​ಗಳು ಮತ್ತು 72 ಸಹಾಯಕ ಸಿಬ್ಬಂದಿ ಪ್ರಯಾಣ ಬೆಳೆಸಲಿದ್ದಾರೆ. 2016 ಮತ್ತು 2020ರ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿದ್ದ ಪಿ.ವಿ ಸಿಂಧು ಮತ್ತು ಶರತ್ ಕಮಲ್ ಈ ಬಾರಿ ಭಾರತದ ಧ್ವಜಧಾರಿಗಳಾಗಿದ್ದಾರೆ. ಇದನ್ನೂ ಓದಿ: ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!