ದರ್ಶನ್‌ ಮನೆ ತೂಗುದೀಪ ನಿವಾಸಕ್ಕೂ ಸಂಚಕಾರ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ಸಿಲುಕಿರುವ ದರ್ಶನ್‌ಗೆ (Darshan) ಮತ್ತೊಂದು ಕಂಟಕ ಎದುರಾಗಿದೆ. ಆರ್‌ಆರ್‌ ನಗರದ ಐಡಿಯಲ್ ಹೋಮ್ಸ್‌ನಲ್ಲಿರುವ ದರ್ಶನ್‌ ಮನೆ ತೂಗುದೀಪ ನಿವಾಸಕ್ಕೂ ಸಂಚಕಾರ ಬರುವ ಸಾಧ್ಯತೆಯಿದೆ.

ಯಾಕೆ ಸಂಕಷ್ಟ?
2016ರಲ್ಲಿ ರಾಜ ಕಾಲುವೆ ಒತ್ತುವರಿ (Raja Kaluve Encroachment) ತೆರವಿಗೆ ಸರ್ಕಾರ ಸೂಚಿಸಿತ್ತು. ಒತ್ತುವರಿ ಮಾಡಿಕೊಂಡ ಕಟ್ಟಡಗಳ ಪಟ್ಟಿ ಮಾಡಿ ಬಿಬಿಎಂಪಿ ಬಿಡುಗಡೆ ಮಾಡಿತ್ತು. ರಾಜಕಾಲುವೆಯ ಬಫರ್ ಝೋನ್ ಮೇಲೆ ದರ್ಶನ್ ನಿವಾಸ ನಿರ್ಮಾಣವಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು.

ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಾಗ ದರ್ಶನ್‌ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಆರ್.ಆರ್ ನಗರದಲ್ಲಿ ಒಟ್ಟು 70 ಕಡೆ ಒತ್ತುವರಿ ಆಗಿರುವುದು ಪತ್ತೆಯಾಗಿತ್ತು. ಹಳೆಯ 37 ಕಡೆ, ಹೊಸದಾಗಿ 33 ಕಡೆ ಒತ್ತುವರಿಯಾಗಿರುವುದು ಬಿಬಿಎಂಪಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: 30 ನಿಮಿಷದ ಹಲ್ಲೆ ವಿಡಿಯೋ ಆಧಾರಿಸಿಯೇ ದರ್ಶನ್‌ ಅರೆಸ್ಟ್‌

 

ಈಗ ಬಿಬಿಎಂಪಿ ತಡೆ ನೀಡಲಾಗಿರುವ ಪ್ರಕರಣಗಳನ್ನ ತೆರವು ಮಾಡಿಸಲು ಮುಂದಾಗಿದೆ. ಒಂದು ವೇಳೆ ಕೋರ್ಟ್‌ ತಡೆಯನ್ನು ತೆರವುಗೊಳಿಸಿದರೆ ದರ್ಶನ್‌ ಮನೆಗೆ ಸಂಕಷ್ಟ ಎದುರುಗಾವ ಸಾಧ್ಯತೆಯಿದೆ.