ಬಡ ಮಕ್ಕಳಿಗೆ ನೀಡೋ ಬ್ಯಾಗ್‍ನಲ್ಲೂ ಬಿಬಿಎಂಪಿ ಕೋಟಿ ಕೋಟಿ ಲೂಟಿ..!

ಬೆಂಗಳೂರು: ಭ್ರಷ್ಟಾಚಾರ ಅಂದರೆ ಬಿಬಿಎಂಪಿ. ಕಳಪೆಗೆ ಮತ್ತೊಂದು ಹೆಸರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಬ ಮಾತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಬಡ ಮಕ್ಕಳಿಗೆ ನೀಡೋ ಬ್ಯಾಗ್‍ನಲ್ಲೂ ಕೋಟಿ ಕೋಟಿ ಲೂಟಿ ಮಾಡುವ ಮೂಲಕ ಬಿಬಿಎಂಪಿಯ ಮತ್ತೊಂದು ಎಡವಟ್ಟು ಬಯಲಾಗಿದೆ.

ಬಿಬಿಎಂಪಿಯಲ್ಲಿ 89 ನರ್ಸರಿ ಶಾಲೆಗಳು, 14 ಪ್ರಾಥಮಿಕ ಶಾಲೆಗಳು, 34 ಫ್ರೌಡ ಶಾಲೆಗಳು, 14 ಕಿರಿಯ ಕಾಲೇಜುಗಳು ಹಾಗೂ 4 ಡಿಗ್ರಿ ಕಾಲೇಜುಗಳು ಸೇರಿದಂತೆ ಒಟ್ಟು 155 ಸ್ಕೂಲ್ ಕಾಲೇಜುಗಳಿವೆ. ಇಷ್ಟು ಸ್ಕೂಲ್ ಮತ್ತು ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳಿಗೆ ಬ್ಯಾಗ್‍ಗಳನ್ನು ನೀಡಲು ಲಿಬರ್ಟಿ ಅನ್ನೋ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಟೆಂಡರ್ ಪ್ರಕರಣ ಕಳೆದ ಶೈಕ್ಷಣಿಕ ವರ್ಷದ ಜೂನ್‍ನಲ್ಲಿಯೇ ಬ್ಯಾಗ್‍ಗಳನ್ನು ನೀಡಬೇಕಿತ್ತು. ಆದರೆ ಕಳೆದ ವಾರ ನೀಡಿದ್ದು, ಬ್ಯಾಗ್‍ಗಳು ಸಂಪೂರ್ಣವಾಗಿ ಕಳಪೆಯಾಗಿವೆ. ಕೊಟ್ಟು ಒಂದು ವಾರ ಆಗಿಲ್ಲ ಆಗಲೇ ಬ್ಯಾಗ್‍ಗಳ ಜಿಪ್, ಹೊಲಿಗೆಗಳು ಕಿತ್ತು ಬರುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ನಾಗೇಶ್ ಹೇಳಿದ್ದಾರೆ.

ಈ ಕಂಪನಿ ಟೆಂಡರ್ ಪಡೆಯುವಾಗ ಹೈಫೈ ಕಂಪನಿಯ ಬ್ಯಾಗ್‍ಗಳನ್ನು ಕೊಡುತ್ತೀವಿ ಎಂದು ಕಥೆ ಹೇಳಿದೆ. ಆದರೆ ಕಂಪನಿ ಈಗ ಯಾವುದೋ ಫುಟ್‍ಪಾತ್‍ನಲ್ಲಿ ಸಿಗುವ ಕಳಪೆ ಬ್ಯಾಗ್‍ಗಳನ್ನು ಪೂರೈಕೆ ಮಾಡಿದೆ. ಈ ಬಗ್ಗೆ ಪೋಷಕರು ಸಾಕಷ್ಟು ಬಾರಿ ಬಿಬಿಎಂಪಿಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಬಿಬಿಎಂಪಿ ಮೇಯರ್ ಅವರನ್ನು ಈ ಬಗ್ಗೆ ಕೇಳಿದರೆ ಈಗಷ್ಟೇ ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಕೂಡಲೇ ನಮ್ಮ ಶಿಕ್ಷಣಾಧಿಕಾರಿಗಳಿಗೆ ಚೆಕ್ ಮಾಡಲು ಆದೇಶ ಮಾಡುತ್ತೀನಿ. ಒಂದು ವೇಳೆ ಕಳಪೆ ಅನ್ನೋದು ಬಯಲಾದರೆ ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರುಸುತ್ತೀವಿ ಎಂದು ಮೇಯರ್ ಗಂಗಾಂಭಿಕೆ ತಿಳಿಸಿದ್ದಾರೆ.

ಇಷ್ಟು ದಿನ ಪಾಲಿಕೆ ಅಧಿಕಾರಿಗಳು ರಸ್ತೆ, ಪಾರ್ಕ್ ಕಾಮಗಾರಿಗಳಲ್ಲಿ ಮಾತ್ರ ಹಣ ಮಾಡುತ್ತಿದ್ದರು. ಆದರೆ ಇದೀಗ ಬಡ ಮಕ್ಕಳಿಗೆ ನೀಡುವ ಸ್ಕೂಲ್ ಬ್ಯಾಗ್‍ಗಳಲ್ಲೂ ಹಣ ಮಾಡಲು ಮುಂದಾಗಿರೋದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಬಗ್ಗೆ ಸರ್ಕಾರ ಸರಿಯಾದ ತನಿಖೆ ನಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *