ವಾರ್ಡ್ ಅಭಿವೃದ್ಧಿ ಮಾಡದೆ ಸಂಬಂಧಿ ಮನೆ ರೋಡಿಗೆ ಟಾರ್- ಜನರ ದುಡ್ಡಲ್ಲಿ ಕೈ ಕಾರ್ಪೊರೇಟರ್ ಗಳ ಜಾತ್ರೆ

ಬೆಂಗಳೂರು: ಕೆ.ಆರ್ ಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಾಲಿಕೆ ಸದಸ್ಯರು ದೋಸ್ತಿಗಳಾಗಿದ್ದು, ಈ ಇಬ್ಬರೂ ತಮ್ಮ ವಾರ್ಡ್‍ಗೆ ಮೂಲಸೌಕರ್ಯ ಅಭಿವೃದ್ಧಿ ಮಾಡದೇ ತಮ್ಮ ಸಂಬಂಧಿಕರ ಮನೆಯ ರೋಡಿಗೆ ಟಾರ್ ಹಾಕಿಸಿದ್ದಕ್ಕೆ ಜನರಿಂದ ಆಕ್ರೋಶ ಕೇಳಿಬಂದಿದೆ.

ಹೌದು. ಬೆಂಗಳೂರಿನ ಬಸವನಪುರ ವಾರ್ಡ್ ಸಂಖ್ಯೆ 53ರಲ್ಲಿರುವ ಸಾಯಿ ಸೆರೆನಿಟಿ ಎಂಬ ಖಾಸಗಿ ಲೇಔಟ್‍ನಲ್ಲಿರೋ ರಸ್ತೆಗೆ ಇದೀಗ ತಾನೇ ಟಾರ್ ಹಾಕಿದ್ದಾರೆ. ಹಾಗೇ ಈ ರಸ್ತೆಯಲ್ಲಿ ನಡೆದು ಹೋದ್ರೆ ಒಂದು ಭವ್ಯ ಬಂಗಲೆ ಎದುರಾಗುತ್ತದೆ. ಅಷ್ಟಕ್ಕೂ ಈ ಬಂಗಲೆ ಯಾವುದೋ ವಿವಿಐಪಿಯದ್ದಲ್ಲ. ಆದರೂ ಈ ಬಂಗಲೆ ಇರುವ ರಸ್ತೆಗೆ ಮಾತ್ರ ಟಾರ್ ಇದೆ ಅಂದ್ರೆ ಎಂಥವರಿಗೂ ಅನುಮಾನ ಬರದೇ ಇರಲ್ಲ.


ಕಾರ್ಪೊರೇಟರ್ ಬಿ.ಎನ್ ಜಯಪ್ರಕಾಶ್ ಅವರ ಕ್ಷೇತ್ರದಲ್ಲಿ ಈ ರಸ್ತೆ ಬರುತ್ತದೆ. ಬಂಗಲೆ ಡಾ ರಮೇಶ್ ಅನ್ನೋರದ್ದಾಗಿದೆ. ಡಾ ರಮೇಶ್ ಬೇರಾರೂ ಅಲ್ಲ, ದೇವಸಂದ್ರ ವಾರ್ಡ್ ಸಂಖ್ಯೆ 55ರ ಕಾರ್ಪೊರೇಟರ್ ಶ್ರೀಕಾಂತ್ ಅವರ ಅಣ್ಣ. ಈ ಕಾರಣಕ್ಕೆ ಡಾ.ರಮೇಶ್ ಮನೆ ಇರುವ ರಸ್ತೆಗೆ ಮಾತ್ರ ಕಾರ್ಪೊರೇಟರ್ ಜಯಪ್ರಕಾಶ್ ಬಿಬಿಎಂಪಿಯಿಂದ ಟಾರ್ ಹಾಕಿಸಿಕೊಟ್ಟಿದ್ದಾರೆ. ಮುಂದಿನ ವಾರ ಈ ಬಂಗಲೆಯ ಗೃಹಪ್ರವೇಶ ಇದೆ. ಗೃಹಪ್ರವೇಶಕ್ಕೆ ಬರುವ ಅತಿಥಿಗಳಿಗಾಗಿ ರಸ್ತೆಗೆ ಟಾರ್ ಹಾಕಿಸಲಾಗಿದೆ. ಮೂರು ದಿನಗಳ ಹಿಂದೆ ಬಸವನಪುರ ವಾರ್ಡ್ ಬಿಬಿಎಂಪಿ ಎಂಜಿನಿಯರ್ ಖುದ್ದು ನಿಂತು ರಸ್ತೆಗೆ ಟಾರ್ ಹಾಕಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ದುರಂತ ಅಂದ್ರೆ ಇದೇ ಲೇಔಟ್‍ನ ಉಳಿದ ರಸ್ತೆಗಳು ಟಾರ್ ಕಾಣದೇ ಗುಂಡಿಗಳಿಂದ ತುಂಬಿಹೋಗಿವೆ. ಅಲ್ಲಿಗೆಲ್ಲ ಟಾರ್ ಹಾಕದ ಈ ಜನಪ್ರತಿನಿಧಿಗಳು ತಮ್ಮ ಸಂಬಂಧಿ ಮನೆ ಇರುವ ರಸ್ತೆಗೆ ಮಾತ್ರ ಟಾರ್ ಹಾಕ್ಸಿದ್ದು ಎಷ್ಟು ಸರಿ? ಬಸವನಪುರ ಮತ್ತು ದೇವಸಂದ್ರ ವಾರ್ಡ್‍ಗಳಲ್ಲಿ ನೀರು, ರಸ್ತೆ, ಕಸದ ಸಮಸ್ಯೆ ಬೇಜಾನ್ ಇದೆ. ಇಷ್ಟಿದ್ರೂ ತಲೆಕೆಡಿಸಿಕೊಳ್ಳದ ಇವರು ತಮ್ಮ ಸ್ವಾರ್ಥಕ್ಕೆ ಜನರ ತೆರಿಗೆ ದುಡ್ಡನ್ನು ಉಡಾಯಿಸಿದ್ದಾರೆ ಎಂದು ನಿವಾಸಿಗಳು ಶಾಪ ಹಾಕ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *