ಟ್ರಂಪ್‌ ಮನೆಯ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು

ನ್ಯೂಯಾರ್ಕ್‌: ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ಮರಳಿಸದೆಯೇ ಅಮೆರಿಕ (America) ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ತಮ್ಮ ನಿವಾಸದ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ಜೋಡಿಸಿಟ್ಟಿದ್ದಾರೆ ಎನ್ನಲಾದ ಫೋಟೋಗಳು ವೈರಲ್‌ ಆಗಿವೆ.

ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ವಾಪಸ್‌ ನೀಡದೇ ತಮ್ಮ ಬಳಿಯೇ ಇಟ್ಟುಕೊಂಡು ಕಾನೂನು ಪ್ರಕ್ರಿಯೆಗೆ ತೊಡಕುಂಟು ಮಾಡಿದ್ದಾರೆಂಬ ಆರೋಪದ ಮೇಲೆ ಟ್ರಂಪ್‌ ವಿರುದ್ಧ ಫೆಡರಲ್‌ ಗ್ರ್ಯಾಂಡ್‌ ಜ್ಯೂರಿ ದೋಷರೋಪಪಟ್ಟಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಫೋಟೋಗಳು ಬಿಡುಗಡೆಯಾಗಿವೆ. ಇದನ್ನೂ ಓದಿ: ವರ್ಗೀಕೃತ ದಾಖಲೆಗಳ ಕೇಸ್ – ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ನಲ್ಲಿರುವ ಟ್ರಂಪ್‌ ನಿವಾಸದಲ್ಲಿ ಸರ್ಕಾರಿ ದಾಖಲೆಗಳನ್ನು ಹೊಂದಿರುವ ಬಾಕ್ಸ್‌ಗಳ ಫೋಟೋಗಳು ಬಿಡುಗಡೆಯಾಗಿದೆ. ಟ್ರಂಪ್‌ ನಿವಾಸದ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲೂ ದಾಖಲೆಗಳನ್ನು ಸಂಗ್ರಹಿಸಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಅಮೆರಿಕದ ಪರಮಾಣ ಶಸ್ತ್ರಾಸ್ತ್ರ ಕಾರ್ಯಯೋಜನೆ, ಯುಎಸ್‌ ಮತ್ತು ಮಿತ್ರರಾಷ್ಟ್ರಗಳ ಸಂಬಂಧ, ಪ್ರತೀಕಾರದ ಮಿಲಿಟರಿ ದಾಳಿಯ ಯುಎಸ್‌ ಯೋಜನೆ ಇತ್ಯಾದಿ ಪ್ರಮುಖ ಮಾಹಿತಿ ದಾಖಲಿಸಲಾಗಿರುವ ಫೈಲ್‌ಗಳು ಇವಾಗಿವೆ. ಅವುಗಳನ್ನು ಅಕ್ರಮವಾಗಿ ಟ್ರಂಪ್ ಇಟ್ಟುಕೊಂಡಿದ್ದಾರೆ ಎಂಬ ಗಂಭೀರ ಆರೋಪವಿದೆ.

80 ಬಾಕ್ಸ್‌ಗಳಲ್ಲಿ ಈ ಪೈಲ್‌ಗಳನ್ನು ಸಂಗ್ರಹಿಸಿ ಇಡಲಾಗಿದೆ. ದೋಷಾರೋಪಪಟ್ಟಿಯಲ್ಲಿ ಹೆಸರಿಸಲಾಗಿರುವ ಟ್ರಂಪ್‌ ಆಪ್ತರೂ ಆಗಿರುವ ಮತ್ತೊಬ್ಬ ಆರೋಪಿ ವಾಲ್ಟ್‌ ನೌಟಾ ಅವರು ತನ್ನ ಸಹದ್ಯೋಗಿಗೆ ಪೆಟ್ಟಿಗೆಗಳಿರುವ ಫೋಟೋ ತೆಗೆದು ಕಳುಹಿಸಿದ್ದಾರೆ. “ನಾನು ಕೋಣೆಗಳ ಬಾಗಿಲು ತೆರೆದಾಗ, ಇದು ಕಂಡುಬಂತು” ಎಂದು ಸಂದೇಶ ಕೂಡ ಕಳುಹಿಸಿದ್ದಾರೆ. ಇದನ್ನೂ ಓದಿ: ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ