109 ಅಡಿ ಎತ್ತರದ ಬಸವೇಶ್ವರ ಮೂರ್ತಿ ಸ್ಥಾಪನೆ – ಫೆ. 22ರಂದು ಸಿಎಂ ಅಡಿಗಲ್ಲು

ಚಿಕ್ಕೋಡಿ/ಬೆಳಗಾವಿ: 109 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಸ್ಥಾಪನೆಯ ಅಡಿಗಲ್ಲು ಪೂಜೆಯನ್ನು ಫೆಬ್ರವರಿ 22ರಂದು ಸಿಎಂ ಯಡಿಯೂರಪ್ಪ ನೆರವೇರಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಲ್ಯಾಣ ಹೆಬ್ಬಾಳದಲ್ಲಿ ಇದೇ ತಿಂಗಳ 21, 22, 23ಕ್ಕೆ ಬಸವ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಸಚಿವರು, ಕೇಂದ್ರ ಮಂತ್ರಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಈ ಕುರಿತು ಹೆಬ್ಬಾಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಸವ ಉತ್ಸವ ಸಮಿತಿಯ ನೇತೃತ್ವ ವಹಿಸಿರುವ ಬಸವ ದೇವರು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.

ಮೂರು ದಿನದ ಬಸವ ಉತ್ಸವದಲ್ಲಿ ನಾಡಿನ ಅನೇಕ ಮಠಾಧೀಶರು ಹಾಗೂ ಸಮಾಜದ ವಿವಿಧ ಸ್ಥರದ ಎಲ್ಲಾ ಜನಾಂಗದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. 22ರಂದು ಕಲ್ಯಾಣ ಹೆಬ್ಬಾಳ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಆಗಮಿಸಲಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲ್ಯಾಣ ಹೆಬ್ಬಾಳದಲ್ಲಿ ಪ್ರತಿಷ್ಠಾಪಿಸಲಿಚ್ಛಿಸಿರುವ 109 ಅಡಿ ಉದ್ಧದ ಬಸವ ಮೂರ್ತಿ ಅಡಿಗಲ್ಲು ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಯಡಿಯೂರಪ್ಪ ಅವರ ಜೊತೆ ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ್ ಜೊಲ್ಲೆ, ಸೇರಿದಂತೆ ಕೇಂದ್ರ ಸಚಿವರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಪಂಡಿತ, ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷಾ ಶಂಕರ ಗುಡಸ, ಎಸ್ ವಾಯ್ ಹಂಜಿ ಸಾಹಿತಿ ಚಿಕ್ಕೋಡಿ, ಬಿ.ಎಲ್ ಖೋತ, ಮಹಾಂತೇಶ ಚೌಗಲ, ಸಿದ್ದು ಪಾಟೀಲ್, ಮಹೇಶ ಕಾಡಗಿ ಸೇರಿದಂತೆ ಇತರರು ಹಾಜರಿದ್ದರು.

Comments

Leave a Reply

Your email address will not be published. Required fields are marked *