ಹುಬ್ಬಳ್ಳಿ: ಗಂಡ-ಹೆಂಡತಿ ಜಗಳ ಸಾಮಾನ್ಯ. ಮತ ಬಂದಿಲ್ಲ ಎನ್ನುವ ಕಾರಣಕ್ಕೆ ಮದುವೆ ಮುರಿಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವರು, ಮೈತ್ರಿ ಸರ್ಕಾರದಿಂದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಈ ಒಂದೇ ಕಾರಣಕ್ಕೆ ಮೈತ್ರಿ ಮುರಿಯಲು ಸಾಧ್ಯವಿಲ್ಲ. ಸಂಬಂಧ ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ನೀಡುವುದು ಸರಿಯಲ್ಲ ಎಂದು ತಿಳಿಸಿದರು.

ನನಗೆ ತಿಳಿದ ಮಟ್ಟಿಗೆ 12ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮೇಲಿವೆ. ಹೀಗಾಗಿ ಮುಖ್ಯಮಂತ್ರಿ ಆಗುವ ಅವರ ಕನಸು ನನಸಾಗುವುದಿಲ್ಲ. ಬಿಜೆಪಿ ಹೈಕಮಾಂಡ್ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದರು.
ರಾಜೀನಾಮೆ ಕೊಡಿಸಿ ಕುದುರೆ ವ್ಯಾಪಾರ ಮಾಡುವ ಯೋಜನೆಯನ್ನು ಬಿಜೆಪಿ ಹೊಂದಿದೆ. ಹೆಚ್ಚು ಅಂದರೆ ವಿಧಾನಸಭೆಯನ್ನು ಸಸ್ಪೆಂಡ್ ಮಾಡಬಹುದು. ಇದು ಸಂವಿಧಾನ ಬಾಹಿರ ಕೆಲಸ. ಇದನ್ನು ಮಾಡುವುದರಲ್ಲಿ ಬಿಜೆಪಿಯವರು ಪ್ರವೀಣರು. ಬಿಜೆಪಿಗೆ ಸೇರುವ ಶಾಸಕರು ಮರು ಆಯ್ಕೆಯಾದರೂ ಪಕ್ಷಾಂತರ ಕಾಯ್ದೆ ಪ್ರಕಾರ ಮಂತ್ರಿ ಆಗಲು ಸಾಧ್ಯವಿಲ್ಲ. 14 ಶಾಸಕರನ್ನು ಖರೀದಿ ಮಾಡುವುದಕ್ಕೆ 600 ಕೋಟಿ ರೂ. ಬೇಕು. ಹೀಗಾಗಿ ಬಿಜೆಪಿ ಈ ಹರಸಾಹಸಕ್ಕೆ ಕೈ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಬಹಳ ನಯ-ನಾಜೂಕಿನಿಂದ ವರ್ತಿಸುತ್ತಿದೆ. ಈಗ ಇಬ್ಬರು ಮಾತ್ರ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಸಿಂಧು ಆಗಲಿದೆ. ಶಾಸಕ ಆನಂದ್ ಸಿಂಗ್ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ವಿಧಾನ ಮಂಡಲ ಕಾಯ್ದೆ ಪ್ರಕಾರ ಕೈ ಬರಹದಲ್ಲಿ ಸ್ಪೀಕರ್ ಗೆ ರಾಜೀನಾಮೆ ನೀಡಬೇಕು. ರಮೇಶ ಜಾರಕಿಹೋಳಿ ತಮ್ಮ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ಕಳುಹಿಸಿದ್ದಾರೆ. ಮೇಲಾಗಿ ಅವರೇ ಖುದ್ದು ಸ್ಪೀಕರ್ ಕೈಗೆ ಕೊಡಬೇಕಿತ್ತು. ರಾಜೀನಾಮೆ ಅಂಗೀಕಾರಕ್ಕೆ ಒಂದು ತಿಂಗಳ ಅವಧಿ ಇರುತ್ತದೆ. ರಾಜೀನಾಮೆ ತಕ್ಷಣವೇ ರಾಜ್ಯ ಸರ್ಕಾರ ಪತನಗೊಳ್ಳುತ್ತದೆ ಎನ್ನುವುದು ತಪ್ಪು ಕಲ್ಪನೆ. ಜುಲೈ 12ಕ್ಕೆ ವಿಧಾನಸಭಾ ಅಧಿವೇಶನ ನಡೆಯಲಿದೆ. ವಿಶ್ವಾಸ ಮತ ಕೇಳುವ ಅಧಿಕಾರ ಸಿಎಂ ಅವರಿಗೆ ಇದೆ. ಅವಿಶ್ವಾಸ ಕೇಳುವ ಅಧಿಕಾರ ವಿರೋಧ ಪಕ್ಷಕ್ಕಿದೆ ಎಂದು ಹೇಳಿದರು.

Leave a Reply