ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಬಸನಗೌಡ ತುರ್ವಿಹಾಳ

ರಾಯಚೂರು: ಬಿಜೆಪಿಯಲ್ಲಿ ಬಂಡಾಯದ ಬೇಗೆ ಮುಂದುವರಿದಿದೆ. ಒಂದು ಕ್ಷೇತ್ರದ ಬಂಡಾಯ ತಣ್ಣಗಾಯ್ತು ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟ ಆಗುತ್ತಿದೆ.

ತುಂಗಭದ್ರಾ ಮೇಲ್ದಂಡೆ ಯೋಜನೆಯ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ತುರ್ವಿಹಾಳ ರಾಜೀನಾಮೆ ನೀಡಿ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾರೆ. ಮಸ್ಕಿಯ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಯಿಂದ ಸ್ಪರ್ಧಿಸಲು ಯಾವುದೇ ತಡೆ ಇರಬಾರದೆಂಬ ಉದ್ದೇಶದಿಂದ ಬಸನಗೌಡ ತುರ್ವಿಹಾಳಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲಾಗಿತ್ತು. ಆದರೆ ಮುಂಬರುವ ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಬಸನಗೌಡ, ಕೇಸ್ ವಾಪಸ್ ಪಡೆಯುವ ಸಂಬಂಧ ಯಾವುದೇ ಸಂಧಾನಕ್ಕೆ ಮಣಿಯದೆ ಕಾಡಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶೀಘ್ರ ತುರ್ವಿಹಾಳ ಕಾಂಗ್ರೆಸ್ ಸೇರೋ ಸಾಧ್ಯತೆ ಇದ್ದು, ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಕಳೆದ ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಕೇವಲ 213 ಮತಗಳ ಅಂತರದಿಂದ ಸೋತಿದ್ದ ಬಸನಗೌಡ, ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಅಕ್ರಮ ಮತದಾನ ಪ್ರಕರಣ ದಾಖಲಿಸಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ.

ಬಿಜೆಪಿ ನಾಯಕರ ಸಂಧಾನ ಫಲಿಸದ ಕಾರಣ ಪ್ರಕರಣವನ್ನ ಹಿಂಪಡೆಯದೆ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಿದ್ದಾರೆ.

Comments

Leave a Reply

Your email address will not be published. Required fields are marked *