ಬಿಎಸ್‌ವೈ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಪ್ಪಟ ಚಿನ್ನ – ಯತ್ನಾಳ್ ವ್ಯಂಗ್ಯ

– ವಿಪಕ್ಷಗಳೊಂದಿಗೆ ವಿಜಯೇಂದ್ರ ಹೊಂದಾಣಿಕೆ ಬಗ್ಗೆ ಸಾಕ್ಷ್ಯಾಧಾರ ಇದೆ; ಹೊಸ ಬಾಂಬ್

ಬೆಳಗಾವಿ: ಯಡಿಯೂರಪ್ಪ (BS Yediyurappa) ಅವರ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಂತೂ ಅಪ್ಪಟ ಚಿನ್ನ, ಬಂಗಾರ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ನಾವು ವಕ್ಫ್ ಹೋರಾಟ ಮಾಡುತ್ತಿದ್ದೇವೆ ಹೊರತು ಯಡಿಯೂರಪ್ಪ ಕುಟುಂಬ, ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಂತೂ ಅಪ್ಪಟ ಚಿನ್ನ, ಬಂಗಾರ ಎಂದು ಹೇಳಿದರೆ ಖುಷಿಯಾಗುತ್ತದೆ. ಅವರಿಗೆ ಭ್ರಷ್ಟಾಚಾರ ಎಂದರೆ ಗೊತ್ತಿಲ್ಲ. ವಿಜಯೇಂದ್ರ ವಿರೋಧ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ. ಸದ್ಯದಲ್ಲಿಯೇ ದಾಖಲೆ ಬಿಡುಗಡೆ ಮಾಡುತ್ತೇನೆ. ವಿಜಯೇಂದ್ರ ಸದನದ ಬಾವಿಯಲ್ಲಿಯೇ ಡಿಕೆಶಿ ಅವರಿಂದ ಏನೇನು ಸಹಿ ಮಾಡಿಸಿಕೊಂಡರು. ಎಂಬುವ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಇಪ್ಪತ್ತು ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದೀರಿ, ವಿಡಿಯೋ ಬಿಡುಗಡೆ ಮಾಡಲಾ? ವಿಜಯೇಂದ್ರ (BY Vijayendra) ಎಂದು ಗುಡುಗಿದರು.ಇದನ್ನೂ ಓದಿ: ಯತ್ನಾಳ್‌ ಸಹ ಜನಪ್ರಿಯ ನಾಯಕರು – ಪ್ರತಾಪ್‌ ಸಿಂಹ

ರಮೇಶ್ ಜಾರಕಿಹೊಳಿ ಅವರಿಗೆ ಏನು ಅನ್ಯಾಯ ಮಾಡಿದ್ದಾರೆ? ವಿಜಯೇಂದ್ರ ಅವರು ಯಾರ ಜೊತೆ ಸೇರಿಕೊಂಡು ರಮೇಶ್ ಅವರ ಮಾನ ಹರಾಜು ಹಾಕಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ರಮೇಶ್ ಅವರಿಗೆ ಮಾನಸಿಕ ಹಿಂಸೆ ನೀಡಿ ಅವರ ತೇಜೋವಧೆ ಮಾಡಿದ್ದು ಯಾರು? ಎಂಬುದನ್ನು ವಿಜಯೇಂದ್ರ ಹೇಳಲಿ. ಜಿಎಂ ಸಿದ್ದೇಶ್ವರ ಹಾಗೂ ಆರ್ ಅಶೋಕ್ ಅವರ ಬಗ್ಗೆ ವಿಜಯೇದ್ರ ಏನು ಹೇಳಿದ್ದಾರೆ? ಎಂಬುದರ ಬಗ್ಗೆಯೂ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.

ಬಿಎಸ್‌ವೈ ಟೀಕೆ ಮಾಡಿದರೆ ದೊಡ್ಡವರಾಗುತ್ತಾರೆಂಬ ಭ್ರಮೆ ಇದೆ ವಿಜಯೇಂದ್ರ ಆರೋಪದ ವಿಚಾರವಾಗಿ, ಈಗ ಅವರ ಬೆಂಬಲಿಗರು ನಮ್ಮನ್ನು ಹೀನಾಯವಾಗಿ ಟೀಕೆ ಮಾಡುತ್ತಿದ್ದಾರೆ ಅವರು ದೊಡ್ಡವರಾಗುತ್ತಾರಾ? ಅವರು ಏನು ಹೇಳಿದರೂ ನಾನು ಅವರನ್ನು ಅಭಿನಂದಿಸುತ್ತೇನೆ, ನನ್ನನ್ನು ಅವರು ಈ ಮೂಲಕ ದೇಶಕ್ಕೆ ಪರಿಚಯ ಮಾಡಿಕೊಡುತ್ತಿದ್ದಾರೆ. ಒಬ್ಬ ಪ್ರಾಮಾಣಿಕ ನಾಯಕನನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಒಂದು ಕುಟುಂಬಶಾಹಿ ನಾಯಕತ್ವ ವಿರುದ್ಧ ಹೋರಾಟ ಮಾಡುವ ನಾಯಕನಾಗಿ ಪರಿಚಯ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದರು.

ಇದು ನಮ್ಮ ಪಕ್ಷದ ಸ್ವಾರ್ಥದ ಹೋರಾಟವಲ್ಲ, ಪಕ್ಷವನ್ನು ಕಟ್ಟಿದ ಅನೇಕ ನಾಯಕರು ಅಧಿಕಾರ ಅನುಭವಿಸದೇ ಇದ್ದಾರೆ. ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರವನ್ನು ತೊಡೆದು ಹಾಕುವ ಬಿಜೆಪಿ ಪಕ್ಷವನ್ನು ಕಟ್ಟಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯವಾಗಿದೆ. ಆಶಯ ಈಡೇರಿಕೆಗಾಗಿ ಈ ಹೋರಾಟ ನಡೆದಿದೆ. ಭ್ರಷ್ಟಾಚಾರ ಮಾಡುವ ವ್ಯಕ್ತಿಗಳನ್ನು ದೂರವಿಟ್ಟು, ಪ್ರಾಮಾಣಿಕ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ಈ ಕುರಿತು ಬೆಳಗಾವಿಯಲ್ಲಿ (Belagavi) ಮಾಧ್ಯಮಗಳೊಂದಿಗೆ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಮಾತನಾಡಿ, ಯತ್ನಾಳ್‌ ವಕ್ಫ್‌ ಬಗ್ಗೆ ಜಾಗೃತಿ ಮೂಡಿಸಲು ಹೋರಾಟ ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ನಮ್ಮ ರಾಜಾಧ್ಯಕ್ಷರು, ಅವರು ನ.20ರಂದು ಸುದ್ದಿಗೋಷ್ಠಿ ಮಾಡಲು ಕರೆಕೊಟ್ಟಿದ್ದರು. ಅದರಂತೆ ಎಲ್ಲಾ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ಮಾಡಿದ್ದೇವೆ. ನ.22ರಂದು ಎಲ್ಲಾ ಜಿಲ್ಲೆಯ ಡಿಸಿ ಕಚೇರಿಗಳಿಗೆ ಮುತ್ತಿಗೆ ಹಾಕಲು ಕರೆಕೊಟ್ಟಿದ್ದರು, ಅದೇ ರೀತಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದೇವೆ. ಅದೇ ರೀತಿ ಯತ್ನಾಲ್‌ ಅವರು ಬಿಜಾಪುರದಿಂದ ಹೋರಾಟ ಆರಂಭ ಮಾಡಿದ್ದರು. ಆ ಹೋರಾಟದಲ್ಲಿ ಕೇಂದ್ರ ಸಚಿವರು ಭಾಗಿಯಾದ್ರು, ಹೀಗಾಗಿ ಈ ಹೋರಾಟದಲ್ಲಿ ಅಪಸ್ವರ, ಬಣ ಹೋರಾಟ ಎಂಬುದು ಅಪ್ರಸುತ್ತ ಅಗುತ್ತೆ ಎಂದು ತಿಳಿಸಿದ್ದಾರೆ.

ಯತ್ನಾಳ್‌ ಸಹ ಜನಪ್ರಿಯ ನಾಯಕರು:
ನಿನ್ನೆ ಸಹ ನಾನು ಹೇಳಿದ್ದೆ ಅಪ್ರಸ್ತುತ ವ್ಯಕ್ತಿಗಳು, ಜನರಿಂದ ತಿರಸ್ಕೃತವಾಗಿದ್ದವರು, ಮೂಲೆ ಗುಂಪಾಗಿದ್ದವರ ಬಗ್ಗೆ ಉತ್ತರ ಕೊಡುವ ಅಗತ್ಯವಿಲ್ಲ. ಹೋರಾಟದ ದಿಕ್ಕು ತಪ್ಪಿಸುವರ ಬಗ್ಗೆ ಮಾತನಾಡುದಿಲ್ಲ. ಇಡೀ ಬಿಜೆಪಿ ವಕ್ಫ್‌ ವಿರುದ್ಧ ವಿಜಯೇಂದ್ರ-ಯತ್ನಾಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಇದಕ್ಕಾಗಿ ಯಾಕೆ ಅಪಸ್ವರ ಬರುತ್ತಿದೆ ನನಗೆ ಗೋತ್ತಿಲ್ಲ. ಯತ್ನಾಳ್‌ ಕೂಡ ಜನಪ್ರಿಯ ನಾಯರಾಗಿದ್ದಾರೆ. ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ. ವಕ್ಫ್‌ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.ಇದನ್ನೂ ಓದಿ:`ನಮ್ಮ ಮೆಟ್ರೋ’ದಿಂದ ಬಿಗ್ ಅಪ್ಡೇಟ್ – ಒಂದೂವರೆ ವರ್ಷದೊಳಗೆ ಬರಲಿದ್ಯಾ ಹೆಬ್ಬಾಳ-ಏರ್‌ಪೋರ್ಟ್ ಮೆಟ್ರೋ?