ಸಾಲ ತೀರಿಸಲಿಲ್ಲವೆಂದು ರೈತನ ಮನೆಯಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಗೂಂಡಾಗಿರಿ!

ಕೊಪ್ಪಳ: ಹತ್ತಾರು ಬ್ಯಾಂಕಿನಲ್ಲಿ ಸಾವಿರಾರು ಕೋಟಿ ಸಾಲ ಮಾಡಿರೋ ಉದ್ಯಮಿಗಳ ವಿರುದ್ಧ ಕ್ರಮಕ್ಕೆ ಬ್ಯಾಂಕ್‍ಗಳು ಮುಂದಾಗುತ್ತಿಲ್ಲ. ಆದರೆ ಇಲ್ಲೊಂದು ಸಹಕಾರಿ ಬ್ಯಾಂಕ್ ರೈತನಿಗೆ ಕೊಟ್ಟ 3 ಲಕ್ಷ ರೂ. ಸಾಲಕ್ಕೆ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಳ್ಳಿ ಕ್ರಾಸ್‍ನಲ್ಲಿನ ರೈತ ಸುಕೊ ಸಹಕಾರಿ ಬ್ಯಾಂಕ್ ನಲ್ಲಿ ಹೈನುಗಾರಿಕೆಗಾಗಿ ಸಾಲ ಮಾಡಿದ್ದರು. ಚಿನ್ನ ಮತ್ತು ಭೂಮಿಯನ್ನು ಅಡವಿಟ್ಟುಕೊಂಡು ಬ್ಯಾಂಕ್ ಸಾಲ ನೀಡಿತ್ತು. ಆದ್ರೆ ಪ್ರಕೃತಿ ವಿಕೋಪದಿಂದ ಹೈನುಗಾರಿಕೆಯಲ್ಲಿ ನಷ್ಟ ಉಂಟಾಗಿದ್ದರಿಂದ ರೈತ ವಿಷ್ಟುವರ್ಧನ ರೆಡ್ಡಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಬ್ಯಾಂಕ್ ಸಿಬ್ಬಂದಿ ರೈತನ ಮನೆಗೆ ನುಗ್ಗಿ ಗೂಂಡಾಗಿರಿ ಮಾಡಿದ್ದಾರೆ.

ಒಂದು ವಾರದ ಹಿಂದೆ ಪೊಲೀಸರ ಸಮೇತ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ, ಮನೆಯಲ್ಲಿನ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ರೈತನ ಮನೆ ಬೀಗ ಮುರಿದು, ಗೃಹ ಉಪಯೋಗಿ ವಸ್ತುಗಳನ್ನು ಎತ್ತೊಯ್ಯುವ ಮೂಲಕ ಅಕ್ಷರಶಃ ಗೂಂಡಾಗಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಗೆ ಬೀಗ ಮುದ್ರೆ ಹಾಕಿದ್ದಾರೆ. ಆಗ ಬ್ಯಾಂಕ್ ಗೆ ಹೋಗಿರೋ ರೈತ, ಯಾವ ಕಾನೂನಿನಡಿ ನಮ್ಮ ಮನೆಗೆ ನುಗ್ಗಿ ಹೀಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬ್ಯಾಂಕ್ ಮ್ಯಾನೇಜರ್ ನಮಗೂ ಮತ್ತು ಮನೆಗೆ ನುಗ್ಗಿ ವಸ್ತು ತೆಗದುಕೊಂಡು ಹೋಗಿದ್ದಕ್ಕೂ ಸಂಬಂಧವಿಲ್ಲ ಎಂದು ಹಿಂಬರಹ ನೀಡಿದ್ದಾರೆ.

ಇದರ ವಿರುದ್ಧ ರೈತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಕೃತ್ಯಕ್ಕೆ ರೈತನ ಕುಟುಂಬ ಕಂಗಾಲಾಗಿದೆ.

Comments

Leave a Reply

Your email address will not be published. Required fields are marked *