ಮಂಡ್ಯ: ಸಿಎಂ ಖಡಕ್ ಆದೇಶದ ಬೆನ್ನಲ್ಲೇ ರೈತರಿಗೆ ಬ್ಯಾಂಕ್‍ಗಳಿಂದ ಸರಣಿ ನೋಟಿಸ್

-ಬರ ಪರಿಹಾರದ ಹಣ ಸಾಲಕ್ಕೆ ವಜಾ

ಮಂಡ್ಯ: ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡ್ಯದ ಮಳವಳ್ಳಿಯಲ್ಲಿ ಯಾವುದೇ ಬ್ಯಾಂಕ್‍ಗಳು ರೈತರಿಂದ ಸಾಲ ವಸೂಲಿಗೆ ಮುಂದಾಗಬೇಡಿ ಅಂತಾ ಖಡಕ್ ಸಂದೇಶ ನೀಡಿದ್ರು. ಆದ್ರೆ ಮಂಡ್ಯದ ಹಲವು ಬ್ಯಾಂಕ್‍ಗಳು ಈಗಾಗಲೇ ರೈತರಿಗೆ ಸಾಲ ಮರುಪಾವತಿಗೆ ನೋಟೀಸ್ ನೀಡಿವೆ. ಅದ್ರ ಜೊತೆ ಸರ್ಕಾರ ಬರ ಪರಿಹಾರಕ್ಕೆಂದು ನೀಡಿದ್ದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡಿವೆ. ಇದ್ರಿಂದ ಕಂಗಾಲಾಗಿರುವ ರೈತ ಸಮುದಾಯ, ಸ್ವಾಮಿ ಮುಖ್ಯಮಂತ್ರಿಗಳೇ ನಮ್ಮ ಕಷ್ಟ ಕೇಳದೇ ಎಲ್ಲಿದ್ದೀರಿ ಅಂತಾ ಕಣ್ಣೀರು ಹಾಕುತಿದ್ದಾರೆ.

ಹೌದು. ಒಂದೆಡೆ ಖಾಲಿ ಕಾಲುವೆ. ಮತೊಂದೆಡೆ ಬೆಳೆ ಇಲ್ಲದೆ ಬಣಗುಡುತ್ತಿರೋ ಭೂಮಿ. ಇಂತಹ ಸಂಕಷ್ಟದಲ್ಲಿರುವ ಮಂಡ್ಯ ರೈತರಿಗೆ ಬ್ಯಾಂಕ್‍ಗಳ ನೋಟಿಸ್ ಬೇರೆ. ಇಲ್ಲಿನ ರೈತರು ಒಡವೆ ಅಡವಿಟ್ಟು ಸಾಲ-ಸೋಲ ಮಾಡಿ ಒಂದಿಷ್ಟು ಬೆಳೆ ಬೆಳೆದಿದ್ರು. ಅದು ಮಳೆಯಿಲ್ಲದೆ ಕೈಗೆ ಬರ್ಲಿಲ್ಲ. ಈ ಸಮಸ್ಯೆಗಳ ಅರಿವಿದ್ರೂ ಬ್ಯಾಂಕ್‍ಗಳು ಮಾತ್ರ ನಿಮ್ಮ ಒಡವೆ ಹರಾಜಿಗೆ ಬಂದಿದೆ ಎಂದು ನೋಟಿಸ್ ನೀಡಿವೆ. ಇದ್ರಿಂದ ಕಂಗಾಲಾಗಿರೋ ರೈತರು, ಮುಖ್ಯಮಂತ್ರಿಗಳೇ ನೀವೇ ಒಳ್ಳೇ ಬೆಲೆಗೆ ನಮ್ಮ ಒಡವೆ ತಗೊಂಡು ನಮ್ಮನ್ನ ಕಾಪಾಡಿ ಅಂತಿದ್ದಾರೆ.

ಮಂಡ್ಯದ ಕೆಲವು ಬ್ಯಾಂಕ್‍ಗಳು ಬರ ಪರಿಹಾರಕ್ಕೆಂದು ರೈತರ ಖಾತೆಗೆ ಹಾಕಿರುವ ಹಣವನ್ನ ಸಾಲಕ್ಕೆ ವಜಾ ಮಾಡಿಕೊಂಡಿವೆ. ಇದ್ರಿಂದ ರೈತರು ಕಣ್ಣೀರು ಹಾಕ್ತಿದ್ದಾರೆ.

ಯಾವುದೇ ಕಾರಣಕ್ಕೆ ಸಾಲಕ್ಕೆ ಇದನ್ನು ಚುಪ್ತಾ ಮಾಡಿಕೊಳ್ಳಬಾರದೆಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಗಳು ಗಮನಕ್ಕೆ ತಂದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಮಂಡ್ಯ ತಹಶೀಲ್ದಾರ್ ಮಾರುತಿ ಪ್ರಸನ್ನ ಹೇಳಿದ್ದಾರೆ.

ಒಟ್ಟಿನಲ್ಲಿ ರೈತರ ಬದುಕು ದಿನ ದಿನಕ್ಕೂ ಮೂರಾಬಟ್ಟೆಯಾಗ್ತಿದೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ರಾಜಕಾರಣ ಮಾಡ್ಕೊಂಡು ಕಾಲ ಕಳೆಯುತ್ತಿರೋದು ವಿಪರ್ಯಾಸ.

Comments

Leave a Reply

Your email address will not be published. Required fields are marked *