ಬಾಂಗ್ಲಾದೇಶದ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ರದ್ದು

ಢಾಕಾ: ಸರ್ಕಾರಿ ಸೇವೆಗಳಲ್ಲಿ ನೀಡಲಾಗುತ್ತಿದ್ದ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ.

ಬಾಂಗ್ಲಾ ದೇಶದಲ್ಲಿ ಈವರೆಗೂ ವಿಶೇಷ ವರ್ಗಕ್ಕೆ ಮೀಸಲಾತಿ ನೀಡಲಾಗುತ್ತಿತ್ತು. ಆದರೆ ಬುಧವಾರದಂದು ಪ್ರಧಾನಿ ಶೇಖ್ ಹಸೀನಾ ಮೀಸಲಾತಿ ರದ್ದು ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಮೀಸಲಾತಿ ರದ್ದು ಮಾಡುವಂತೆ ಆಗ್ರಹಿಸಿ ರಾಜಧಾನಿ ಢಾಕಾದಲ್ಲಿ ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಮಣಿದ ಸರ್ಕಾರ ಈಗ ಮೀಸಲಾತಿಯನ್ನು ರದ್ದು ಪಡಿಸುವ ನಿರ್ಧಾರವನ್ನು ಕೈಗೊಂಡಿದೆ.

ಬಾಂಗ್ಲಾದೇಶದ ಸರ್ಕಾರಿ ವಲಯದಲ್ಲಿ ಶೇ.56 ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿತ್ತು. ವಿಶೇಷವಾಗಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಅಂಗವಿಕಲರಿಗೆ ಉದ್ಯೋಗದಲ್ಲಿ ಮೀಸಲಾತಿ ಇತ್ತು. ಈಗ ಮೀಸಲಾತಿ ರದ್ದಾಗಿದ್ದರೂ ಅಂಗವಿಕಲರು ಮತ್ತು ಹಿಂದುಳಿದ ವರ್ಗದ ಅಲ್ಪಸಂಖ್ಯಾತರಿಗಿದ್ದ ಮೀಸಲಾತಿ ಮುಂದುವರಿಯಲಿದೆ.

ದೇಶದ ಜನಸಂಖ್ಯೆಯಲ್ಲಿ ಇರುವ ಶೇ.98 ರಷ್ಟು ಜನ ಕೇವಲ ಶೇ.44 ಉದ್ಯೋಗಕ್ಕೆ ಪೈಪೋಟಿ ನಡೆಸಬೇಕು. ಶೇ.2 ರಷ್ಟಿರುವವರಿಗೆ ಶೇ.56 ಮೀಸಲಾತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ತೀವ್ರಗೊಂಡ ಬಳಿಕ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಮೀಸಲಾತಿ ರದ್ದು ಮಾಡುವ ಕುರಿತು ನಿರ್ಧಾರವನ್ನು ಪ್ರಕಟಿಸಿದೆ.

ವಿದ್ಯಾರ್ಥಿಗಳ ಹಿಂಸಾಚಾರದ ಪ್ರತಿಭಟನೆಯಿಂದ ಢಾಕಾ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿದ್ಯಾರ್ಥಿಗಳ ವಿರುದ್ಧ ಅಶ್ರುವಾಯು ಹಾಗೂ ರಬ್ಬರ್ ಗುಂಡು ಹಾರಿಸಿದ್ದರು. ಈ ಸಂಬಂಧ 100ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಲ್ಲದೇ ದೇಶ ನಾನಾ ಭಾಗಗಳಲ್ಲಿ ಮೀಸಲಾತಿ ರದ್ದತಿಯ ವಿರುದ್ಧ ಹೋರಾಟಗಳು ನಡೆಯುತಿತ್ತು.

ವಿದ್ಯಾರ್ಥಿಗಳ ಪ್ರತಿಭಟನೆಯಿಂದ ದೇಶದ್ಯಾಂತ ಇರುವ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿ ಹಾಗೂ ಪರೀಕ್ಷೆ ರದ್ದಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಶೇಖ್ ಹಸೀನಾ, ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಮೀಸಲಾತಿ ರದ್ದಾಗಿರುವುದರಿಂದ ಈಗ ವಿದ್ಯಾರ್ಥಿಗಳು ಮನೆಗೆ ತೆರಳಬೇಕು ಎಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *