18 ತಿಂಗಳ ಬ್ಯಾನ್ ಭೀತಿಯಲ್ಲಿ ಬಾಂಗ್ಲಾ ಕ್ರಿಕೆಟರ್ ಶಕೀಬ್- ಭಾರತ ಪ್ರವಾಸ ಅನುಮಾನ

ದುಬೈ: ಬಾಂಗ್ಲಾದೇಶದ ಕ್ರಿಕೆಟ್ ಟೀಮ್‍ನ ಅಗ್ರ ಆಲ್‍ರೌಂಡರ್ ಶಕೀಬ್ ಅಲ್ ಹಸನ್ ಅವರಿಗೆ 18 ತಿಂಗಳ ಬ್ಯಾನ್ ಭೀತಿ ಎದುರಾಗಿದ್ದು, ಭಾರತ ಪ್ರವಾಸಕ್ಕೆ ಲಭ್ಯವಾಗುವ ಅನುಮಾನ ಮೂಡಿದೆ.

ಐಸಿಸಿಯ ಸೂಚನೆಯ ಮೇರೆಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಶಕೀಬ್ ಅಲ್ ಹಸನ್ ಅವರನ್ನು ಭಾರತ ಪ್ರವಾಸಕ್ಕಾಗಿ ಅಭ್ಯಾಸ ಶಿಬಿರದಿಂದ ತೆಗೆದುಹಾಕಿದೆ. ಬುಕ್ಕಿಂಗ್ ಆಫರ್ ಬಗ್ಗೆ ಐಸಿಸಿಗೆ ಯಾವುದೇ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶಕೀಬ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ಶಕೀಬ್ ವಿರುದ್ಧ 18 ತಿಂಗಳ ನಿಷೇಧವನ್ನು ಸಹ ವಿಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭಾರತದ ಪ್ರವಾಸಕ್ಕೂ ಮುನ್ನ ಬಾಂಗ್ಲಾ ತಂಡದ ಟೆಸ್ಟ್ ಮತ್ತು ಟಿ-20 ನಾಯಕನ ವಿರುದ್ಧ ಕೈಗೊಂಡ ಈ ಕ್ರಮವು ಬಿಸಿಬಿಯ ತೊಂದರೆಗಳನ್ನು ಹೆಚ್ಚಿಸಿದೆ. ಈ ಪ್ರವಾಸದ ಸಮಯದಲ್ಲಿ ಬಾಂಗ್ಲಾದೇಶ ತಂಡವು ಭಾರತ ವಿರುದ್ಧ ಮೂರು ಟಿ-20 ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಐಸಿಸಿಯ ಕೋರಿಕೆಯ ಮೇರೆಗೆ ಬಿಸಿಬಿ ಶಕೀಬ್‍ರನ್ನು ಅಭ್ಯಾಸದಿಂದ ತೆಗೆದುಹಾಕಿದೆ. ಈ ಕಾರಣದಿಂದಾಗಿ ಅವರು ಅಭ್ಯಾಸದಲ್ಲಿ ಕಾಣಿಸಿಕೊಂಡಿಲ್ಲ. ಸೋಮವಾರ ಸಂಜೆ ನಡೆದ ಸಭೆಯಲ್ಲಿ ಶಕೀಬ್ ಭಾಗವಹಿಸಲಿಲ್ಲ. ಏತನ್ಮಧ್ಯೆ, ಐಸಿಸಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಶಕೀಬ್ ಅಂತರರಾಷ್ಟ್ರೀಯ ಪಂದ್ಯವೊಂದಕ್ಕೆ ಮುಂಚಿತವಾಗಿ ಬುಕ್ಕಿಯಿಂದ ಪ್ರಸ್ತಾಪವನ್ನು ಸ್ವೀಕರಿಸಿದ್ದರು. ಆದರೆ ಅದನ್ನು ಐಸಿಸಿಯ ಭ್ರಷ್ಟಾಚಾರ ಮತ್ತು ಭದ್ರತಾ ಘಟಕಕ್ಕೆ (ಎಸಿಎಸ್‍ಯು) ತಿಳಿಸಿಲ್ಲ. ಈ ಬಗ್ಗೆ ಶಕೀಬ್ ಇತ್ತೀಚೆಗೆ ಎಸಿಎಸ್‍ಯು ತನಿಖಾ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಜೊತೆಗೆ ಬಾಂಗ್ಲಾದೇಶ ತಂಡದ ಕ್ರಿಕೆಟಿಗರು 11 ಅಂಶಗಳ ಬೇಡಿಕೆಗಾಗಿ ಮುಷ್ಕರ ನಡೆಸಿದಾಗ, ಅವರನ್ನು ಶಕೀಬ್ ನೇತೃತ್ವ ವಹಿಸಿದ್ದರು.

ಅಭ್ಯಾಸ ಪಂದ್ಯ ಮತ್ತು ಪೂರ್ವ ಪ್ರವಾಸ ಶಿಬಿರದಿಂದ ಹೊರಗುಳಿದ ಶಕೀಬ್ ಭಾರತ ಪ್ರವಾಸದಲ್ಲಿ ಲಭ್ಯತೆಯ ಬಗ್ಗೆ ಅನುಮಾನ ಶುರುವಾಗಿದೆ. ಬುಧವಾರ ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮಿಸಲಿದೆ. ಆದರೆ ಶಕೀಬ್ ಅದರ ಭಾಗವಾಗುವುದಿಲ್ಲ. ಶಕೀಬ್ ಅನುಪಸ್ಥಿತಿಯಲ್ಲಿ ತಂಡದ ಮುಷ್ಫಿಕುರ್ ರಹೀಂ ಅವರಿಗೆ ಟೆಸ್ಟ್ ನಾಯಕತ್ವ ನೀಡಿದರೆ, ಟಿ-20 ಸರಣಿಗೆ ಮಮ್ಮುದುಲ್ಲಾ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಭಾರತದ ಪ್ರವಾಸದ ಮುನ್ನವೇ ನಡೆದ ಘಟನೆಯಿಂದ ಬಿಸಿಬಿಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬಾಂಗ್ಲಾದೇಶ ತಂಡದ ಭಾರತ ಪ್ರವಾಸವು ನವೆಂಬರ್ 3 ರಿಂದ ಮೂರು ಪಂದ್ಯಗಳ ಟಿ-20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. ನಂತರ ಉಭಯ ತಂಡಗಳು ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ನವೆಂಬರ್ 14ರಿಂದ ಇಂದೋರ್‍ನಲ್ಲಿ ಆಡಲಿವೆ. ಎರಡನೇ ಟೆಸ್ಟ್ ನವೆಂಬರ್ 22ರಿಂದ ಕೋಲ್ಕತ್ತಾದಲ್ಲಿ ನಡೆಯಲಿದೆ.

Comments

Leave a Reply

Your email address will not be published. Required fields are marked *